ADVERTISEMENT

ಹಾಸನ | ಬಿಸಿಲು ಲೆಕ್ಕಿಸದೆ ರಥ ಎಳೆದ ಜನ

ಯರಗನಾಳು ಕೋಡಿದೇವಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:17 IST
Last Updated 13 ಏಪ್ರಿಲ್ 2025, 16:17 IST
ಯರಗನಾಳು ಕೋಡಿದೇವಿ ರಥೋತ್ಸವ ಭಾನುವಾರ ವೈಭವದಿಂದ ನಡೆಯಿತು
ಯರಗನಾಳು ಕೋಡಿದೇವಿ ರಥೋತ್ಸವ ಭಾನುವಾರ ವೈಭವದಿಂದ ನಡೆಯಿತು    

ಗಂಡಸಿ: ಅರೆ ತಮಟೆ, ನಗಾರಿ, ಕಹಳೆ ವಾದ್ಯಗಳ ಮನಸೂರೆಗೊಳ್ಳುವ ನಾದಕ್ಕೆ ಹೆಜ್ಜೆ ಹಾಕಿದ ಸೋಮನ ಕುಣಿತ, ಸಾಗರದಂತೆ ಸೇರಿದ್ದ ಜನಸ್ತೋಮದ ನಡುವೆ ಭಾನುವಾರ ಯರಗನಾಳು ಕೋಡಿದೇವಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಯರಗನಾಳು, ದೊಡ್ಡಯರಗನಾಳು, ಹಿರಿಯಾಳು, ಹೋರಿ ಮಂಗಳಾಪುರ, ಬಸವನಪುರ, ನಾರಾಯಣಪುರ, ತಿಮ್ಲಾಪುರ, ಜೋಯಿಸರಹಳ್ಳಿ, ಹಿರಿ ಸಮುದ್ರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮಾವಿನ ತಳಿರು ತೋರಣ, ಬಾಳೆಕಂದು, ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಮನಸೂರೆಗೊಳ್ಳುವಂತಿತ್ತು.

ವರ್ಣರಂಜಿತ ಪಟಗಳು, ಹೂಗಳಿಂದ ಅಲಂಕರಿಸಿದ ರಥದಲ್ಲಿದ್ದ ಕೋಡಿದೇವಿ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡ ಭಕ್ತ ಸಾಗರ, ಧೂಪ ಹಾಕಿ, ಹಣ್ಣು ಧವನ ಎಸೆಯುವ ಮೂಲಕ ಪ್ರಾರ್ಥಿಸಿದರು.

ADVERTISEMENT

ಭಾನುವಾರ ನಸುಕಿನಲ್ಲಿ ಯರಗನಾಳು, ದೊಡ್ಡಯರಗನಾಳು, ಹಿರಿಯಾಳು ಗ್ರಾಮಗಳ ಚಿಕ್ಕರಥೋತ್ಸವ ನಡೆಯಿತು. ದೇವಿಯ ಮೂಲಸ್ಥಾನದಲ್ಲಿ ಪೂಜಾ ವಿಧಿವಿಗಳ ಬಳಿಕ ಕೋಡಿದೇವಿ, ಅಂತರಘಟ್ಟಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ರಥದ ಬಳಿಗೆ ತಂದು ಪ್ರದಕ್ಷಿಣೆ ಹಾಕಿ, ರಥದಲ್ಲಿ ಕೂರಿಸಿಲಾಯಿತು. ರಥಕ್ಕೆ ಬಲಿ ಪ್ರದಾನ ಕಾರ್ಯ ನಡೆಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಡುವ ಬಿಸಿಲನ್ನು ಲೆಕ್ಕಿಸದೇ ಭಕ್ತ ಸಮೂಹ ಹುಮ್ಮಸ್ಸಿನಿಂದ ಜಯ ಘೋಷದೊಂದಿಗೆ ರಥ ಎಳೆಯುವ ಮೂಲಕ ಭಕ್ತಿ ಮೆರೆದರು.

 ಜಾತ್ರಾ ಮೈದಾನದಲ್ಲಿ ಲಘು ಉಪಾಹಾರ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಹುಟ್ಟೂರಿನ ಜಾತ್ರೆಗೆ ದೇಶ, ವಿದೇಶ, ರಾಜ್ಯ, ಹೊರ ರಾಜ್ಯಗಳಲ್ಲಿ ನೆಲೆಸಿರುವ ಯರಗನಾಳು ಬ್ರಾಹ್ಮಣರ ಸಂಘದವರು ಕುಟುಂಬ ಸಮೇತ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಜಾತ್ರಾ ಕಮಿಟಿ ಅಧ್ಯಕ್ಷ ಚಂದ್ರೇಗೌಡ, ಧರ್ಮದರ್ಶಿ ಪಟೇಲ್ ಗಿಡ್ಡೆಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ. ಮಲ್ಲೇಶ್, ಕಾರ್ಯದರ್ಶಿ ನಂಜೇಶಿಗೌಡ ಕಮಿಟಿಯ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.