ADVERTISEMENT

ಯೋಜನಾ ನಿರಾಶ್ರಿತರಿಗೆ ಪರಿಹಾರ ವಿತರಿಸಿ

15 ವರ್ಷಗಳಿಂದ ಬಾಕಿ ಇರುವ ಪ್ರಕರಣ ಕಾಲಮಿತಿಯೊಳಗೆ ಪೂರ್ಣಗೊಳಿಸಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:38 IST
Last Updated 15 ಜೂನ್ 2019, 15:38 IST
ಹಾಸನದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. 
ಹಾಸನದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.    

ಹಾಸನ: ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳು ಸೇರಿದಂತೆ ಸರ್ಕಾರಿ ಅಭಿವೃದ್ಧಿಗಾಗಿ ಜಮೀನು ಕಳೆದು ಕೊಂಡವರಿಗೆ ಹಲವು ವರ್ಷಗಳಿಂದ ಬಾಕಿ ಇರುವ ಪರಿಹಾರ ಶೀಘ್ರವೇ ವಿತರಣೆ ಮಾಡುವಂತೆ ಸಚಿವ ಎಚ್.ಡಿ. ರೇವಣ್ಣ ಸೂಚನೆ ನೀಡಿದರು.

ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು, 15-20 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.

ಸರ್ಕಾರಿ ಉದ್ದೇಶಕ್ಕೆ ಭೂಸ್ವಾಧೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಬಾಕಿ ಪಾವತಿ ಬಗ್ಗೆ ಎಲ್ಲಾ ತಹಶೀಲ್ದಾರರು ಸಭೆ ನಡೆಸಿ ವಿವರ ಸಂಗ್ರಹಿಸಿ, ಅಲ್ಲದೇ ಕರ ಪತ್ರ ಮುದ್ರಿಸಿ ಗ್ರಾಮಲೆಕ್ಕಿಗರ ಮೂಲಕ ಎಲ್ಲಾ ಗ್ರಾಮಗಳಲ್ಲಿ ವಿತರಣೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಬೇಗ ಪರಿಹಾರ ನೀಡಬೇಕು ಎಂದು ಹೇಳಿದರು.

ADVERTISEMENT

ತಾಲ್ಲೂಕುವಾರು ಹೆಚ್ಚುವರಿ ಇರುವ ಸರ್ವೆಯರ್‌ಗಳನ್ನು ಕಾರ್ಯ ಒತ್ತಡಗಳಿರುವ ಕಚೇರಿಗಳಿಗೆ ನಿಯೋಜನೆಗೊಳಿಸಬೇಕು. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಕೆಳ ಹಂತದ ಹುದ್ದೆಗಳ ನೇಮಕಾತಿ, ಪದೋನ್ನತಿಗಳನ್ನು ಬೇಗನೆ ಮುಗಿಸಿ, ಹೆಚ್ಚುವರಿ ಖಾಸಗಿ ಸರ್ವೆಯರ್‌ಗಳನ್ನು ಬಾಹ್ಯ ಗುತ್ತಿಗೆ ಮೇರೆಗೆ ಪಡೆದು, ಬಾಕಿ ಇರುವ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ನಿರ್ದೇಶನ ನೀಡಿದರು.

ವಯೋವೃದ್ಧರು, ಅಂಗವಿಕಲರು, ಬಡವರು, ನಿರ್ಗತಿಕರನ್ನು ಅಲೆಸಬೇಡಿ. ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ ಪಡಿತರ ಕಾರ್ಡ್ ವಿತರಣೆ ಯೋಜನೆಗಳು ಅನುಷ್ಠಾನ ಪರಿಣಾಮಕಾರಿಯಾಗಿ ನಡೆಸಿ, ಯಾವುದೇ ಅರ್ಹ ಫಲಾನುಭವಿಗಳ ಮಾಸಿಕ ಪಿಂಚಣಿಯಿಂದ ಹೊರಗುಳಿಯದಂತೆ ಕ್ರಮವಹಿಸಿ, ತಿಂಗಳೊಳಗೆ ಪೂರ್ಣಗೊಳಿಸಿ ಎಂದು ಸಚಿವರು ಸೂಚಿಸಿದರು.

ಜಿಲ್ಲೆಯ ಎಲ್ಲಾ ಕಾರ್ಖಾನೆಗಳ ಮುಖ್ಯಸ್ಥರನ್ನು ಕರೆಸಿ, ನೇಮಕಾತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಕ್ತ ಸೂಚನೆ ನೀಡಲು ಜಿಲ್ಲಾಧಿಕಾರಿ ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ರೇವಣ್ಣ ತಿಳಿಸಿದರು.

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು ಪ್ರತ್ಯೇಕವಾಗಿ ತಿಂಗಳಿಗೆ ಕನಿಷ್ಠ ನಾಲ್ಕು ಗ್ರಾಮಗಳಿಗೆ ಎಲ್ಲಾ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಕುಂದು, ಕೊರತೆ ಆಲಿಸಿ ಅರ್ಜಿ ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಬೇಕು. ಅಲ್ಲದೇಮೊಸಳೆಹೊಸಳ್ಳಿ, ಹರಿಹರಪುರ, ಹೆರಗು, ಸೋಮನಹಳ್ಳಿಯಲ್ಲಿ ನಾಡ ಕಚೇರಿ ನಿರ್ಮಿಸಲು ಪ್ರಸ್ತಾವ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪವಿಭಾಗಾಧಿಕಾರಿಗಳಾದ ಎಚ್.ಎಲ್ ನಾಗರಾಜ್, ಕವಿತಾ ರಾಜಾರಾಂ, ವಿಶೇಷ ಭೂಸ್ವಾಧೀನಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.