ADVERTISEMENT

ಅಧಿಕಾರಿಗಳಿಗೆ ವಿವೇಚನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 6:05 IST
Last Updated 17 ಆಗಸ್ಟ್ 2012, 6:05 IST

ಹಾವೇರಿ: `ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವವಿವೇಚನೆಯಿಂದ ಕೆಲಸ ಮಾಡುವುದರ ಜೊತೆಗೆ ಸಕಾಲಕ್ಕೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳ ಬೇಕೆಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಹೇಳಿದರು.

ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಗುರುವಾರ ಬೆಳಗಾವಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ಏರ್ಪಡಿಸಲಾಗಿರುವ ಎರಡು ದಿನಗಳ ಆಡಳಿತ ಪುನರ್‌ಮನನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಸೇವೆ ಸವಾಲಿನ ಕೆಲಸವಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕಾರ್ಯನಿರ್ವಹಣೆಯ ಪೂರ್ವಾಪರಗಳನ್ನು ಸರಿಯಾಗಿ ತಿಳಿದುಕೊಂಡು, ಕಾನೂನಿನ ಪರಧಿಯಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಆಗ ಮಾತ್ರ ಎಲ್ಲ ತರಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಮಾತನಾಡಿ, ಆಡಳಿತದಲ್ಲಿ ಸಿಬ್ಬಂದಿ ಕೊರತೆ ಮಧ್ಯೆಯೂ ತಂತ್ರಜ್ಞಾನದ ಬಳಕೆಯಿಂದ ಸಮರ್ಪಕ ಕೆಲಸ ಮಾಡಲು ಸಾಧ್ಯವಿದೆ. ಹೊಸ ತಂತ್ರಜ್ಞಾನದ ನೆರವು ಪಡೆದು ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸಲು ಸಿಬ್ಬಂದಿ ಸಜ್ಜುಗೊಳ್ಳಬೇಕು ಎಂದು ತಿಳಿಸಿದರು.

ಸಿಬ್ಬಂದಿ ಎಷ್ಟೇ ಓದಿದ್ದರೂ ಕೂಡ ತಾನು ನಿರ್ವಹಿಸುವ ಕೆಲಸದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದರೇ, ತನ್ನ ಹುದ್ದೆಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಪ್ರೇರಣೆ ನೀಡಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ ಮಾತನಾಡಿ, ಸರ್ಕಾರದ ಬಹುತೇಕ ಇಲಾಖೆಗಳು ಒಂದಿಲ್ಲೊಂದು ಸಂಪನ್ಮೂಲದ ಕೊರತೆ ಅನುಭವಿಸುತ್ತಿವೆ. ಲಭ್ಯವಿರುವ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರದ ಆಶಯಗಳ ಈಡೇರಿಕೆಗೆ ಶ್ರಮಿಸಬೇಕು ಎಂದರು. ವಾರ್ತಾ ಇಲಾಖೆ ಸಿಬ್ಬಂದಿಯ ನೈಪುಣ್ಯತೆಯನ್ನು ಬಳಸಿಕೊಳ್ಳು ಉದ್ದೇಶದಿಂದ ಇಂತಹ ತರಬೇತಿಗಳನ್ನು ಮೈಸೂರು, ಬೆಂಗಳೂರು ಹಾಗೂ ಗುಲ್ಬರ್ಗಾ ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ  ಎಂದರು.

ಇದೇ ಸಂದರ್ಭದಲ್ಲಿ ಡಿಡಿಪಿಐ ಕಚೇರಿ ವ್ಯವಸ್ಥಾಪಕ ಎ.ಎಂ.ನೀಲಕಂಠಪ್ಪ, ವಾರ್ತಾ ಇಲಾಖೆ ಕೇಂದ್ರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಚಂದ್ರಪ್ಪ, ಅಧೀಕ್ಷಕ ಶಿವಣ್ಣ ವಕ್ಕರ, ಎ.ಸಿ.ತಿಪ್ಪೇಸ್ವಾಮಿ, ಜಯಂತ ಅವರು ಆಡಳಿತ ಕಾರ್ಯ ವಿಧಾನ ವಿಷಯ ಕುರಿತು ಮಾತನಾಡಿದರು.

ಧಾರವಾಡ ವಾರ್ತಾ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್.ಹಿರೇಮಠ, ವಿಜಾಪುರ ವಾರ್ತಾಧಿಕಾರಿ ಡಾ.ರಂಗನಾಥ ಸೇರಿದಂತೆ ವಿಭಾಗದ ಏಳು ಜಿಲ್ಲೆಗಳ  ಅಧಿಕಾರಿ ಹಾಗೂ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಬಸವರಾಜ ಕಂಬಿ ಸ್ವಾಗತಿಸಿದರು. ಪ್ರಹ್ಲಾದ್ ಪರ್ವತಿ ನಿರೂಪಿಸಿದರು. ಸಿ.ಪಿ.ಮಾಯಾಚಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.