ADVERTISEMENT

ಅನಾರೋಗ್ಯ ಸ್ಥಿತಿಯಲ್ಲಿ ‘ಆರೋಗ್ಯ ಕೇಂದ್ರ’

ಪ್ರವೀಣ ಸಿ.ಪೂಜಾರ
Published 18 ಡಿಸೆಂಬರ್ 2017, 9:12 IST
Last Updated 18 ಡಿಸೆಂಬರ್ 2017, 9:12 IST
ನಾಗೇಂದ್ರನಮಟ್ಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತುಕ್ಕು ಹಿಡಿದ ಫಲಕ ಹಾಗೂ ಚರಂಡಿ ಕೊಳಚೆ
ನಾಗೇಂದ್ರನಮಟ್ಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ತುಕ್ಕು ಹಿಡಿದ ಫಲಕ ಹಾಗೂ ಚರಂಡಿ ಕೊಳಚೆ   

ಹಾವೇರಿ: ಅನಾರೋಗ್ಯದಿಂದ ಬಳಲುವ ಜನತೆಗೆ ಚಿಕಿತ್ಸೆ ನೀಡಬೇಕಾದ ನಾಗೇಂದ್ರನ ಮಟ್ಟಿಯಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವೇ ಹಲವು ಸಮಸ್ಯೆಗಳಿಂದ ರೋಗಗ್ರಸ್ತವಾಗಿದೆ. ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು 2004ರಿಂದ ಈ ತನಕ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಅವ್ಯವಸ್ಥೆಯ ಆಗರವಾಗಿದೆ.

ಆರೋಗ್ಯ ಕೇಂದ್ರಕ್ಕೆ ಯಾವುದೇ ಕಾಂಪೌಂಡ್ ಇಲ್ಲ. ಇದರಿಂದ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಷ್ಟೇ ಅಲ್ಲದೇ, ಆವರಣವನ್ನು ಸಾರ್ವಜನಿಕರು ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು ಕಟ್ಟಿಗೆ, ವಾಹನ, ಹೆಂಚು ಸೇರಿದಂತೆ ತಮ್ಮ ವಸ್ತುಗಳನ್ನು ಇಟ್ಟಿದ್ದಾರೆ. ಆರೋಗ್ಯ ಕೇಂದ್ರದ ಸುತ್ತ ಆಳೆತ್ತರ ಗಿಡ-ಗಂಟಿಗಳನ್ನು ಬೆಳೆದಿದೆ. ಇದನ್ನು ಸ್ವಚ್ಛಗೊಳಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದ ಆರೋಗ್ಯ ಕೇಂದ್ರ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ.

ADVERTISEMENT

‘ದಿನ ಬೆಳಗಾದರೆ ನೂರಾರು ಹೊರ ರೋಗಿಗಳು ಬರುತ್ತಾರೆ. ಆದರೆ, ಉತ್ತಮ ಚಿಕಿತ್ಸೆ ಮಾತ್ರ ಮರೀಚಿಕೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಸಾರ್ವಜನಿಕರಿಗೆ ನರಕ ದರ್ಶನವಾಗುತ್ತಿದೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ಸಣ್ಣ ಪುಟ್ಟ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಇಲ್ಲಿ ಪ್ರಥಮ ಚಿಕಿತ್ಸೆಯೂ ನೀಡುವುದಿಲ್ಲ. ಗಾಯಾಳುಗಳನ್ನು ಮುಟ್ಟಿಯೂ ನೋಡುವುದಿಲ್ಲ. ಇಲ್ಲಿ ಇಂದು ಹಾಸಿಗೆ ವ್ಯವಸ್ಥೆ ಮಾತ್ರ ಇದ್ದು, ಎಲ್ಲದಕ್ಕೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸುತ್ತಾರೆ’ ಎಂದು ಸ್ಥಳೀಯ ನಿವಾಸಿ ಮಲ್ಲಪ್ಪ ಬಣಕಾರ ದೂರುತ್ತಾರೆ.

ಇಲ್ಲಿ ಒಬ್ಬ ವೈದ್ಯರು ಸೇರಿದಂತೆ ಒಟ್ಟು ಎಂಟು ಜನರು ಗುತ್ತಿಗೆ ಆಧಾರದ ಮೇಲಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದಿಷ್ಟ ಸಮಯಕ್ಕೆ ಕೆಲಸಕ್ಕೆ ಹಾಜರಾಗದ ಕಾರಣ ರೋಗಿಗಳು ಗಂಟೆ ಗಟ್ಟಲೆ ಕಾಯುವುದು ಇಲ್ಲಿ ಸಾಮಾನ್ಯವಾಗಿದೆ. ಈ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ನಾಗೇಂದ್ರನಮಟ್ಟಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯ ಹಾಗೂ ಸಿಬ್ಬಂದಿ ಇಲ್ಲದ ಕಾರಣ, ಒಬ್ಬರು ನಿವೃತ್ತ ವೈದ್ಯರು ಹಾಗೂ ಏಳು ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದಿನ ಶಾಸಕರು ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದರು. ಈಗ ಇಲ್ಲಿನ ಬಸ್‌ ತಂಗುದಾಣದ ಹಿಂಭಾಗದಲ್ಲಿ ಜಾಗ ಗುರುತಿಸಲಾಗಿದ್ದು, ನೂತನ ಕಟ್ಟಡ ಮಂಜೂರಾಗಿದೆ’ ಎಂದು ನಗರಸಭೆ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಈ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪರ್ಯಾಯ ಸ್ಥಳ ಗುರುತಿಸಿ ನೂತನ ಕಟ್ಟಡ ಮಂಜೂರು ಮಾಡಿದ್ದಾರೆ
ಮಲ್ಲೇಶಪ್ಪ ಪಟ್ಟಣಶೆಟ್ಟಿ
ನಗರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.