ADVERTISEMENT

ಅರಣ್ಯ ಇಲಾಖೆಯಿಂದ ತಾತ್ಕಾಲಿಕ ಗುಡಿಸಲು ತೆರವು

ಗುಂಡೂರ ಗ್ರಾಮ ಸಮೀಪದ ಅರಣ್ಯ ಪ್ರದೇಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 13:03 IST
Last Updated 19 ಜೂನ್ 2018, 13:03 IST
ಗುಂಡೂರ ಗ್ರಾಮ ಸಮೀಪ ಅರಣ್ಯ ಇಲಾಖೆಗೆ ಸೇರಿದ ಜಾಗೆಯಲ್ಲಿ ಗ್ರಾಮಸ್ಥರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಗುಡಿಸಲುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ
ಗುಂಡೂರ ಗ್ರಾಮ ಸಮೀಪ ಅರಣ್ಯ ಇಲಾಖೆಗೆ ಸೇರಿದ ಜಾಗೆಯಲ್ಲಿ ಗ್ರಾಮಸ್ಥರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಗುಡಿಸಲುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ   

ಹಾನಗಲ್: ತಾಲ್ಲೂಕಿನ ಗುಂಡೂರ ಗ್ರಾಮ ಸಮೀಪದ ಅರಣ್ಯ ಇಲಾಖೆಗೆ ಒಳಪಟ್ಟ ಜಾಗೆಯಲ್ಲಿ ಗ್ರಾಮಸ್ಥರು ಹಾಕಿಕೊಂಡಿದ್ದ ತಾತ್ಕಾಲಿಕ ಗುಡಿಸಲುಗಳನ್ನು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.


ಗುಂಡೂರ ಹಾಗೂ ಬೆಳವತ್ತಿ ನಡುವಿನ ಗುಡ್ಡದ ಭಾಗದಲ್ಲಿ ಎರಡು ದಿನಗಳಿಂದ ಗುಂಡೂರ ತಾಂಡಾ (ಶಿವಾಜಿಪೂರ) ನಿವಾಸಿಗಳು ಸುಮಾರು 25 ಗುಡಿಸಲು ಹಾಕಿಕೊಂಡಿದ್ದರು. ಈ ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಲ್ಲ ಗುಡಿಸಲುಗಳನ್ನು ತೆರವು ಮಾಡಿದರು.

ಅರಣ್ಯ ಪ್ರದೇಶದ ಈ ಸ್ಥಳ ಗುಡ್ಡದ ಇಳಿಜಾರು ಹಾಗೂ ಕಲ್ಲುಗಳಿಂದ ಆವೃತವಾಗಿದೆ. ಹೀಗಾಗಿ ಇಲ್ಲಿ ಗಿಡ–ಮರ ಬೆಳೆಸಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಆದರೆ ಟ್ರೆಂಚ್‌ ಹೊಡೆದು ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗೆ ಎಂದು ಗುರುತಿಸುವ ಕೆಲಸ
ವನ್ನು ಮಾಡಲಾಗಿದೆ.

ADVERTISEMENT

‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ, ‘ಇಲ್ಲಿರುವ 42 ಎಕರೆ ಜಾಗೆ ಅರಣ್ಯ ಇಲಾಖೆಗೆ ಸೇರಿದೆ. ಈ ಪೈಕಿ ಸುಮಾರು 30 ಎಕರೆ ಜಾಗೆ ಅತಿಕ್ರಮಿಸಿಕೊಂಡು ತಾತ್ಕಾಲಿಕ ಶೆಡ್‌ಗಳ ಮೂಲಕ ನಿವೇಶನ ಗೊತ್ತು ಮಾಡಿಕೊಳ್ಳುವ ಗ್ರಾಮಸ್ಥರ ಪ್ರಯತ್ನವನ್ನು ತಡೆಯಲಾಗಿದೆ’ ಎಂದರು.

‘ಈ ಸ್ಥಳದಲ್ಲಿ ಗ್ರಾಮದ ಕೆಲವರು ಮೇವು ಸಂಗ್ರಹಣೆ ಮಾಡಿಕೊಂಡಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಗ್ರಾಮಸ್ಥರು ಇಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕೆ ಯತ್ನಿಸುತ್ತಿರುವುದು ಇದು 3ನೇ ಬಾರಿ. ಪ್ರತಿ ಸಲವೂ ಇಲಾಖೆ ತೆರವು ಕಾರ್ಯಾಚರಣೆ ನಡೆಸಿದೆ. ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಲು ಬಿಡುವುದಿಲ್ಲ’ ಎಂದರು.

ಗ್ರಾಮದ ಮುಖಂಡ ಕುಮಾರ ಲಮಾಣಿ, ‘ಶಿವಾಜಿಪೂರ ತಾಂಡಾ ಈಗ ಕಂದಾಯ ಗ್ರಾಮವಾಗಿದೆ. ಇಲ್ಲಿನ ಜನಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ನಿವೇಶನದ ಕೊರತೆ ಆಗಿದೆ. ನಿವೇಶನ ವಿತರಣೆಗೆ ಕಂದಾಯ ಇಲಾಖೆ ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.