ADVERTISEMENT

ಆಶ್ರಯ ಫಲಾನುಭವಿಗಳ ಆಯ್ಕೆಗೆ ವಿರೋಧ:ತಾ.ಪಂ. ಸಭೆಯಲ್ಲಿ ಆಕ್ರೋಶ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 7:25 IST
Last Updated 22 ಮೇ 2012, 7:25 IST

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಆಶ್ರಯ, ಬಸವ ಯೋಜನೆಯಡಿ ಗ್ರಾಮಸಭೆ ನಡೆಸದ ಅಧ್ಯಕ್ಷರು, ತಮ್ಮ ಮನಸ್ಸಿಗೆ ಬಂದ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ, ಈಗಾಗಲೇ ಆಯ್ಕೆ ಮಾಡಿದ ಪಟ್ಟಿಯನ್ನು ರದ್ದುಪಡಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿ, ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಪಿಡಿಒಗಳನ್ನು ಒಂದೆಡೆ ಸೇರಿಸಿ ಮನೆಗಳನ್ನು ವಿತರಣೆ ಮಾಡಿದ್ದಾರೆ, ಇದು ಚುನಾವಣೆ ಗಿಮಿಕ್ಕು ಎಂದು ಬಸನಗೌಡ ಪಾಟೀಲ ದೂರಿದರು. ತಾ.ಪಂ. ಅಧ್ಯಕ್ಷ ಬಸವರಾಜ ಕೇಲಗಾರ ಅವರು ಅರ್ಹಫಲಾನುಭವಿಗಳನ್ನೇ ಆಯ್ಕೆ ಮಾಡಿದ್ದೇವೆ, ಈಗಾಗಲೇ ತಯಾರಿಸಿದ ಪಟ್ಟಿಯಲ್ಲಿ ಯಾರು ಅನರ್ಹರು, ಯಾರು ಮನೆ ಹೊಂದಿದ್ದಾರೆ ಎಂಬುದನ್ನು ತಿಳಿಸಿದರೆ ಅಂಥವರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಸೂಚಿಸಿದಾಗ ಸದಸ್ಯರು ಪ್ರತಿಭಟನೆ ಹಿಂತೆಗೆದು ಕೊಂಡರು.
 
ತಾ.ಪಂ ಸದಸ್ಯ ಎಂ.ಸಿ. ಮಲ್ಲನಗೌಡರ, ರಾಣೆಬೆನ್ನೂರ ರಸ್ತೆಯಿಂದ ಮಾಕನೂರವರೆಗೆ ರಸ್ತೆ ದುರಸ್ತಿಗಾಗಿ ಎಷ್ಟು ಹಣ ಬಿಡುಗಡೆಯಾಗಿತ್ತು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಪ್ರಶ್ನಿಸಿದರು. ಜಿಪಂ ಎಂಜಿನಿಯರ್ ಆ ಕೆಲಸಕ್ಕೆ ಸುಮಾರ 90 ಸಾವಿರ ರೂ. ಬೇಕಾಗುತ್ತದೆ, ಇನ್ನು ಹಣ ಬಿಡುಗಡೆಯಾಗಿಲ್ಲ ಎಂದು ಸಭೆಗೆ ತಿಳಿಸಿದಾಗ, ತಾಪಂ ಸದಸ್ಯರು ಹಾಗಿದ್ದರೇ ಹಣ ಇಲ್ಲದೆ ಹೇಗೆ ಅದನ್ನು ದುರಸ್ತಿ ಮಾಡಿದಿರಿ, ಒಂದು ಟ್ರ್ಯಾಕ್ಟರ್‌ನಲ್ಲಿ ಡಾಂಬರ್ ತಂದು ಇಡೀ ರಸ್ತೆಗೆ ಬೊಗಸೆಯಷ್ಟು ಸುರಿದು ಹೋಗಿದ್ದಾರೆ.

ಒಂದು ಟ್ರ್ಯಾಕ್ಟರ್‌ನಲ್ಲಿನ ಡಾಂಬರಿಗೆ 30 ಸಾವಿರ ವೆಚ್ಚವಾದರೆ ಉಳಿದ ಹಣ ಎಲ್ಲಿ ಎಂದು ಮರು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಜಿ. ಶಿವಣ್ಣ ಅವರು ಹಾಗೇನು ಇರುವುದಿಲ್ಲ. ರಸ್ತೆ ದುರಸ್ತಿಯ ಪಾಕೇಜ್ ವರ್ಕ್‌ನಲ್ಲಿ ಕೆಲಸ ಮಾಡಲಾಗಿದೆ. ಆದಷ್ಟೂ ಬೇಗ ಆ ರಸ್ತೆಯನ್ನು ದುರಸ್ತಿ ಮಾಡಲು ತಿಳಿಸಿದರು.

ಜಿ.ಪಂ ಸದಸ್ಯ ಮಂಜುನಾಥ ಓಲೇಕಾರ ಅವರು ಓವರ ಲೋಡ ಹಾಕಿಕೊಂಡು, ಮರಳು ಸಾಗಿಸುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ, ಇದಕ್ಕೆ ಕಡಿವಾಣ ಹಾಕಿ ಎಂದಾಗ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅದಕ್ಕೆ ನಾವು ಜವಾಬ್ದಾರಿಯಲ್ಲ, ಆರ್‌ಟಿಒ ಅಥವಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು ಎಂದರು. 

ಮರಳು ಮಾರಾಟದ ಬಗ್ಗೆ ಸರ್ಕಾರಿಂದ ಸಿಗುವ ಮರಳಿನ ಬಗ್ಗೆ ಎಲ್ಲ ರೈತರಿಗೂ ಸರಿಯಾದ ಮಾಹಿತಿ ನೀಡಿರಿ, ಇದರಿಂದ ಅನಗತ್ಯವಾಗಿ ಪೊಲೀಸರಿಗೆ ದಂಡ ಕಟ್ಟುವುದು ತಪ್ಪುತ್ತದೆ ಎಂದು ಓಲೇಕಾರ ತಿಳಿಸಿದರು.
ಜಿ.ಪಂ. ಸದಸ್ಯೆ ಲಲಿತಾ ಜಾಧವ, ನನ್ನ ಕ್ಷೇತ್ರದ ಕಜ್ಜರಿ, ದೇವರಗುಡ್ಡ ಮತ್ತಿತರ ಗ್ರಾಮಗಳಲ್ಲಿ ಕೆರೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಮಳೆ ಪ್ರಾರಂಭವಾದರೆ ಕೆಲಸ ಆಗುವುದಿಲ್ಲ.
 
ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಜಲಾನಯನ ಇಲಾಖೆಯ ಅಧಿಕಾರಿ, ಅಲ್ಲಿ ಕಲ್ಲು ಬಂಡೆಗಳು ಹೆಚ್ಚಾಗಿ ಬರುತ್ತಿರುವುದರಿಂದ ಕೆಲಸ ನಿಂತಿದೆ. ಕಲ್ಲುಗಳನ್ನು ಒಡೆಯಲು ಸಿಡಿ (ಬಾಂಬ್) ಮದ್ದುಗಳನ್ನು ಬಳಸಬೇಕಾಗುತ್ತದೆ. ಇವುಗಳನ್ನು ಬಳಸುವ ಮೊದಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಾಗುತ್ತದೆ ಈ ಕುರಿತು ಈಗಾಗಲೇ ತಿಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.