ADVERTISEMENT

ಉದ್ಯೋಗ ಖಾತ್ರಿ ಹಣ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:28 IST
Last Updated 18 ಜುಲೈ 2013, 6:28 IST

ಬ್ಯಾಡಗಿ: ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿ ಕೈಕೊಂಡ ಕಾಮಗಾರಿಗಳ ಹಣ ಪಾವತಿಗೆ ಪಂಚಾಯ್ತಿ ಹಾಗೂ ಜಲಾನಯನ ಇಲಾಖೆಯ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದಕ ಪದಾಧಿಕಾರಿಗಳು ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ  ರುದ್ರಗೌಡ ಕಾಡನಗೌಡ್ರ, `ಕಳೆದ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ 12 ರೈತರು ಜಮೀನಿನಲ್ಲಿ ಬದು ನಿರ್ಮಿಸಿಕೊಂಡಿದ್ದಾರೆ. ಆದರೆ, ಜಲಾನಯನ ಇಲಾಖೆ ರೈತರಿಗೆ ಈವರೆಗೂ ಹಣ ಪಾವತಿಸಿಲ್ಲ' ಎಂದು ಆರೋಪಿಸಿದರು.

`ಹಣ ಪಾವತಿಸುವಂತೆ ರೈತರು ಅಧಿಕಾರಿಗಳ ಬಳಿ ಗೋಗರೆದರೂ ಯಾವುದೇ ಪ್ರಯೋಜವಾಗಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳಿ ರೈತರನ್ನು ಸಾಗ ಹಾಕುತ್ತಿದ್ದಾರೆ. ಮೇಲಾಧಿಕಾರಿಗಳು ಈ ಕುರಿತು ಗಮನ ಹರಿಸಿ ಕೂಡಲೇ ರೈತರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಣ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು' ಎಂದು ಆಗ್ರಹಿಸಿದರು.

ರೈತ ಮುಖಂಡ ಬಸವಂತಪ್ಪ ವಡ್ಡರ ಮಾತನಾಡಿ, `ಕುಟುಂಬದ ಸದಸ್ಯರೆಲ್ಲಾ ಸೇರಿಕೊಂಡು ಬದು ನಿರ್ಮಾಣ ಮಾಡಿದ್ದು, ಹಣ ಪಾವತಿಸುವಂತೆ  ಕೇಳಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಆರೋಪಿಸಿದರು.

ರೈತ ಮುಖಂಡರಾದ ಉಜ್ಜಪ್ಪ ಚಿಕ್ಕಳ್ಳಿ, ಜಗದೀಶ ಕೆಳಗಿನಮನಿ, ಸಿದ್ದಪ್ಪ ವಡ್ಡರ, ಯಲ್ಲಪ್ಪ ಕುರುಬರ, ಫಕ್ಕೀರೇಶ ಅಜಗೊಂಡ್ರ, ಶಂಕ್ರಪ್ಪ ಮುಗಳಿಕಟ್ಟಿ, ಫಕ್ಕೀರಪ್ಪ ವಡ್ಡರ, ಇಬ್ರಾಹಿಂಸಾಬ್ ಸುಲೇಮಾನವರ, ಹೊನ್ನಪ್ಪ ಕುರುಬರ, ಷಣ್ಮುಖಪ್ಪ ದುಮ್ಮಿಹಾಳ, ಶಿವರಾಜ ಬಣಕಾರ, ಲಕ್ಷ್ಮವ್ವ ತಳವಾರ, ನಿಂಗಪ್ಪ ದುಮ್ಮಿಹಾಳ, ಮಂಜಪ್ಪ ತಳವಾರ, ಮಂಜು ವಡ್ಡರ ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.