ADVERTISEMENT

‘ಎದೆಗುಂದಬೇಡಿ, ನಿಮ್ಮೊಂದಿಗೆ ನಾವಿದ್ದೇವೆ’

ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಕಾಶ ಕೋಳಿವಾಡ ಅಭಯ

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:15 IST
Last Updated 16 ಮೇ 2018, 12:15 IST

ರಾಣೆಬೆನ್ನೂರು: ‘ಕ್ಷೇತ್ರದ ಕೆಪಿಜೆಪಿ ಅಭ್ಯರ್ಥಿ ಆರ್‌. ಶಂಕರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಅವರ ತೀರ್ಪು ಅಂತಿಮವಾಗಿದ್ದು, ಅದಕ್ಕೆ ನಾವು ತಲೆ ಬಾಗುತ್ತೇವೆ. ಹಾಗೆಂದ ಮಾತ್ರಕ್ಕೆ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಿಲ್ಲ. ನಾವು ಸೋತು ಗೆದ್ದಿದ್ದೇವೆ. ನಿಮ್ಮನೊಂದಿಗೆ ನಾವಿದ್ದೇವೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಪಕ್ಷದ ಕಾರ್ಯಕರ್ತರಿಗೆ ಅಭಯ ನೀಡಿದರು.

‘ಶಂಕರ್‌ ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ. ಬದಲಿಗೆ, ಇಡೀ ರಾಣೆಬೆನ್ನೂರಿಗೆ ಅವರು ಶಾಸಕರು. ತಾಲ್ಲೂಕಿನ ಜನತೆ ಶಾಂತಿ, ನೆಮ್ಮದಿಯಿಂದ ಬದುಕಬೇಕು. ಅವರಾಗಲಿ, ಅವರ ಬೆಂಬಲಿಗರಾಗಲೀ ದಬ್ಬಾಳಿಕೆಗೆ ಮುಂದಾಗಬಾರದು. ಎಲ್ಲರನ್ನು ಸಹೋದರರಂತೆ ಕಾಣಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ತಂದೆ ತಾಲ್ಲೂಕಿನ ಅಭಿವೃದ್ದಿಗೆ ₹ 1,038 ಕೋಟಿ ಅನುದಾನ ತಂದಿದ್ದಾರೆ. ₹ 400 ಕೋಟಿ ಅನುದಾನ ಇನ್ನೂ ಬಳಕೆಯಾಗಿಲ್ಲ. ಕೆಲ ಕಾಮಗಾರಿಗಳು ಬಾಕಿ ಉಳಿದಿದ್ದು, ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಸರ್ಕಾರದ ಅನುದಾನ ಕ್ಷೇತ್ರದ ಜನತೆಗೆ ಸದ್ಬಳಕೆಯಾಗಲಿ. ರಾಣೆಬೆನ್ನೂರು ಸರ್ವತೋಮುಖ ಅಭಿವೃದ್ದಿಯಾಗುವುದೇ ನಮ್ಮ ಕನಸು’ ಎಂದರು.

ADVERTISEMENT

‘ಈ ಬಾರಿ ಚುನಾವಣೆಯಲ್ಲಿ ನಮ್ಮದು ಸೋಲಲ್ಲ. ಮುಂದಿನ ದಿನಗಳಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ಅರಿತು ಮುಂದಿನ ಚುನಾವಣೆಗೆ ಸಜ್ಜಾಗುತ್ತೇವೆ’ ಎಂದು ಹೇಳಿದರು.

ಶಿವಯೋಗಿ ಹಿರೇಮಠ, ಶಶಿಧರ ಬಸೆನಾಯಕ ಹಾಗೂ ಬಸವರಾಜ ಹುಚಗೊಂಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.