ADVERTISEMENT

ಕಕ್ಷಿದಾರರಿಗೆ ಶೀಘ್ರ ನ್ಯಾಯದಾನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 6:50 IST
Last Updated 13 ಸೆಪ್ಟೆಂಬರ್ 2011, 6:50 IST

ಹಾವೇರಿ: `ಭಾರತೀಯ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತಿ ಮಹತ್ವದ ಸ್ಥಾನವನ್ನು ಕಲ್ಪಿಸಲಾಗಿದ್ದು, ಶೀಘ್ರ ಹಾಗೂ ವೆಚ್ಚದಾಯಕವಲ್ಲದ ನ್ಯಾಯದಾನದ ಮೂಲಕ ಬಡ ಕಕ್ಷಿದಾರರ ಹಿತ ರಕ್ಷಣೆಗೆ ವಕೀಲರು ಮುಂದಾಗಬೇಕೆಂದು~ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸಲಹೆ ಮಾಡಿದ್ದಾರೆ.

ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗ ದಲ್ಲಿ ವಕೀಲರಿಗೆ ಏರ್ಪಡಿಸಿದ್ದ ಒಂದು ವಾರದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಧಾನದ ಮೂಲಕ ಪ್ರಕರಣ ಗಳನ್ನು ಇತ್ಯರ್ಥ ಪಡಿಸಲು ಅನುಕೂಲ ವಾಗುವಂತೆ 2005ರಲ್ಲಿ ಸರ್ಕಾರವು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನ್ಯಾಯಾಲಯಗಳಲ್ಲಿ ಸಂಧಾನ ಕೇಂದ್ರ ಗಳನ್ನು ಸ್ಥಾಪಿಸಿತು.

ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ಮೂಲಕ ಇತ್ಯರ್ಥ ಪಡಿಸಿ, ಕಕ್ಷಿದಾರರಿಗೆ ತ್ವರಿತ ನ್ಯಾಯ ದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಈ ಉದ್ದೆೀಶ ಸಾಧನೆ ಯಾಗಬೇಕಾದರೆ, ವಕೀಲರು ವ್ಯಾಜ್ಯ ಗಳ ತೀವ್ರ ಇತ್ಯರ್ಥಕ್ಕೆ ಮುಂದಾಗ ಬೇಕು ಎಂದರು.

ಜಿಲ್ಲಾ ನ್ಯಾಯಾದೀಶ ಕೆ.ಸಿ.ರಾಮ ಕೃಷ್ಣಯ್ಯ ಮಾತನಾಡಿ, ಜಿಲ್ಲೆಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಈವರೆಗೆ 262 ಪ್ರಕರಣಗಳು ಬಂದಿದ್ದು, ಇದರಲ್ಲಿ 29 ಪ್ರಕರಣ ಇತ್ಯರ್ಥವಾಗಿವೆ. 16 ಪ್ರಕರಣಗಳಲ್ಲಿ ರಾಜಿ ಸಾಧ್ಯವಾಗದೇ ನ್ಯಾಯಾಲಯಗಳಿಗೆ ಹಿಂದಿರುಗಿಸಲ್ಪಟ್ಟಿವೆ. ಉಳಿದ 17 ಪ್ರಕರಣಗಳು ಮಧ್ಯಸ್ಥಿಕೆಗಾಗಿ ಕಾದಿವೆ ಎಂದರು.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಸಮನ್ವಯಕಾರ ಪ್ರಸಾದ ಸುಬ್ಬಣ್ಣ ಮಾತನಾಡಿ, 2007ರಲ್ಲಿ ರಾಜ್ಯ ಮಟ್ಟದ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಈವರೆಗೆ ಒಟ್ಟು 20,872 ಪ್ರಕರಣ ಗಳು ಈ ಕೇಂದ್ರಕ್ಕೆ ಸಲ್ಲಿಕೆಗಾಗಿ.

16,057 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಒಳಪಡಿಸಿ, 10,075 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ಶೇ 80ರಷ್ಟು ಪ್ರಕರಣಗಳು ವಿವಾಹ ವಿಚ್ಚೇದನ ಪ್ರಕರಣಗಳಾಗಿವೆ ಎಂದು ಹೇಳಿದರು.

ಮಧ್ಯಸ್ಥಿಕೆ ಮೂಲಕ ಪ್ರಕರಣ ಗಳನ್ನು ಇತ್ಯರ್ಥಪಡಿಸಿದಲ್ಲಿ ನ್ಯಾಯಾ ಲಯದ ಸಮಯ ಹಾಗೂ ಕಕ್ಷಿದಾರರ ಹಣ ಉಳಿತಾಯವಾಗಲಿದೆಯಲ್ಲದೇ, ಶೀಘ್ರ ನ್ಯಾಯದಾನ ಸಾಧ್ಯವಾಗಲಿದೆ ಎಂದರು.ಸಂಪನ್ಮೂಲ ವ್ಯಕ್ತಿ ಆರ್. ವಿಜಯಕುಮಾರ ಹಾಗೂ ಜೋಸೆಫ್ ಮಾತನಾಡಿ, ನ್ಯಾಯಾಲಯಕ್ಕೆ ಬರುವ ಸಣ್ಣ ಪುಟ್ಟ ಪ್ರಕರಣಗಳನ್ನು ನ್ಯಾಯಾ ಧೀಶರು ಕಕ್ಷಿದಾರರ ಅನುಕೂಲಕ್ಕಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಬೇಕು ಎಂದರು.

ತ್ವರಿತ ನ್ಯಾಯಾಲಯದ ನ್ಯಾಯಾ ಧೀಶ ಜಿ.ಎನ್. ಶ್ರೀಂಠಯ್ಯ ಹಾಗೂ ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಶ್ರೀಪಾದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದ ಹಿರಿಯ ನ್ಯಾಯವಾದಿಗಳು ಪಾಲ್ಗೊಂಡಿದ್ದರು.

ಹಿರಿಯ ದಿವಾಣಿ ನ್ಯಾಯಾಧೀಶ ಬಿ. ವೆಂಕಟೇಶ ಸ್ವಾಗತಿಸಿದರು. ಸುದರ್ಶನ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ದರು. ಅಪರ ಹಿರಿಯ ದಿವಾಣಿ ನ್ಯಾಯಾಧೀಶ ಕೆ. ರವೀಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.