ADVERTISEMENT

‘ಕತ್ತಲ್ ರಾತ್’ ಮೇಲೆ ಚುನಾವಣಾ ಆಯೋಗ ನಿಗಾ

ಹರ್ಷವರ್ಧನ ಪಿ.ಆರ್.
Published 12 ಮೇ 2018, 9:33 IST
Last Updated 12 ಮೇ 2018, 9:33 IST

ಹಾವೇರಿ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದ್ದು, ಶುಕ್ರವಾರ ಪಾದಯಾತ್ರೆ ಹಾಗೂ ಮನೆ ಮನೆ ಭೇಟಿ ಮೂಲಕ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ಹಣ- ಮದ್ಯ ಮತ್ತಿತರ ಹಂಚಿಕೆಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸರು ತೀವ್ರ ಕಣ್ಣಿಟ್ಟಿದ್ದಾರೆ.

ಕತ್ತಲ್ ರಾತ್: ಚುನಾವಣೆಯ ಹಿಂದಿನ ದಿನದ ರಾತ್ರಿ ಮತದಾರರಿಗೆ ಹಣ ಹಂಚಿಕೆ ಮಾಡುವುದನ್ನು ‘ಕತ್ತಲ್‌
ರಾತ್’ ಎನ್ನುತ್ತಾರೆ. ಈ ಬಗ್ಗೆ ಚುನಾ ವಣಾ ಆಯೋಗ ಹೆಚ್ಚಿನ ನಿಗಾ ವಹಿಸಿದೆ.

‘ಅವಧಿ ಮುಗಿದ ಬಳಿಕ ಬಹಿರಂಗ ಪ್ರಚಾರ ನಡೆಸಿದ ಯಾವುದೇ ಪ್ರಕರಣಗಳು ನಡೆದಿಲ್ಲ. ರಾಣೆಬೆನ್ನೂರಿನ ಯಕ್ಲಾಸಪುರ ಮತ್ತು ಶಿಗ್ಗಾವಿಯಿಂದ ಎರಡು ಕರೆಗಳು ಬಂದಿದ್ದು, ಪರಿಶೀಲಿಸಿದಾಗ ಸುಳ್ಳು ದೂರುಗಳು ಎಂಬುದು ಖಚಿತಗೊಂಡಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ 82 ಸೆಕ್ಟರ್ ಪೊಲೀಸ್ ಮೊಬೈಲ್, 18 ಇನ್‌ಸ್ಪೆಕ್ಟರ್ ಸೂಪರ್ ವೈಸರ್ ಮೊಬೈಲ್, 6 ಡಿವೈಎಸ್ಪಿ ಸೂಪರ್ ವೈಸರ್ ಮೊಬೈಲ್ ವಾಹನಗಳು ರಾತ್ರಿ –ಹಗಲು ಗಸ್ತು ತಿರುಗುತ್ತಿವೆ. ಅಲ್ಲದೇ, ಇತರ ಇಲಾಖೆಗಳ ಫ್ಲೈಯಿಂಗ್ ಸ್ಕ್ವಾಡ್, ಇತರ ವಿಚಕ್ಷಣಾ ದಳಗಳೂ ಗಸ್ತು ಮಾಡುತ್ತಿವೆ. ಎಲ್ಲ (25)ಚೆಕ್‌ ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ’ ಎಂದರು.

ಕ್ಷೇತ್ರದ ಹೊರಗಿನ ವ್ಯಕ್ತಿಗಳ ಬಗ್ಗೆ ಎಲ್ಲ ಹೋಟೆಲ್‌ಗಳಲ್ಲಿ ಪರಿಶೀಲಿಸಲಾಗುತ್ತಿದೆ ಎಂದರು.

ಗೋವಾದಿಂದ ವಾಪಸ್:

ಕೆಲಸಕ್ಕಾಗಿ ಗೋವಾ, ಮುಂಬಯಿ, ಪುಣೆ, ಮಂಗಳೂರು, ಬೆಂಗಳೂರಿಗೆ ಹೋಗಿದ್ದ ಕಾರ್ಮಿಕರು ಹಾಗೂ ಇತರ ನೌಕರರು ಮತದಾನಕ್ಕಾಗಿ ಜಿಲ್ಲೆಗೆ ವಾಪಸ್‌ ಬರುತ್ತಿದ್ದಾರೆ.

‘ಗೋವಾದಿಂದ ಹಾವೇರಿ, ರಾಣೆಬೆನ್ನೂರು, ಹುಬ್ಬಳ್ಳಿಗೆ ಬರುವ ಬಸ್‌ಗಳು ಕಿಕ್ಕಿರಿದು ತುಂಬಿವೆ. ಅಲ್ಲದೇ, ಕದಂಬ ಮತ್ತಿತರ ಖಾಸಗಿ ಬಸ್‌ಗಳು ಕೂಡಾ ತುಂಬಿವೆ. ಈ ಪೈಕಿ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರ, ಶಿಗ್ಗಾವಿ, ಸವಣೂರ, ಬಂಕಾಪುರ ಹಾಗೂ ಸಮೀಪದ ಗದಗ, ಕುಂದುಗೋಳ ಮತ್ತಿತರ ಪ್ರದೇಶದ
ಜನ ಹೆಚ್ಚಿದ್ದರು’ ಎಂದು ಮತದಾನಕ್ಕಾಗಿ ಗೋವಾದಿಂದ ವಾಪಸ್ ಬಂದ ನಗರದ ನಾಗೇಂದ್ರನಮಟ್ಟಿಯ ತಾಜುದ್ದೀನ್‌ ಖಾನ್‌ ಸಾಬ್ ಮಂಜಲಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋವಾ ದಾರಿ ಮಧ್ಯೆ ಅನುಮೋಡಾದ ಚೆಕ್ ಪೋಸ್ಟ್‌ನಲ್ಲಿ ನಿಲ್ಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ಬಾಟಲಿಯನ್ನೂ ಪರಿಶೀಲಿಸುತ್ತಾರೆ’ ಎಂದರು.

ವಾಸ್ಕೋ – ಯಶವಂತಪುರ ಹಾಗೂ ವಾಸ್ಕೋ –ಚೆನ್ನೈ ರೈಲಿನ ಸಾಮಾನ್ಯ (ಜನರಲ್‌)ಬೋಗಿಯೂ ಕಿಕ್ಕಿರಿದು ತುಂಬಿರುತ್ತದೆ ಎಂದರು.

ಡಿ.ಸಿ. ಹೆಸರು ಫೋರ್ಜರಿ!

ಅಭ್ಯರ್ಥಿಯೊಬ್ಬರು ಜಿಲ್ಲಾಧಿಕಾರಿ ಹೆಸರನ್ನು ಫೋರ್ಜರಿ ಮಾಡಿ, ಸಮುದಾಯವೊಂದರ ಮತ ಯಾಚಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.