ADVERTISEMENT

ಕಾರ್ಖಾನೆ ಎದುರು ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 10:20 IST
Last Updated 26 ಮಾರ್ಚ್ 2011, 10:20 IST
ಕಾರ್ಖಾನೆ ಎದುರು ಕಾರ್ಮಿಕರ ಪ್ರತಿಭಟನೆ
ಕಾರ್ಖಾನೆ ಎದುರು ಕಾರ್ಮಿಕರ ಪ್ರತಿಭಟನೆ   

ಹಾವೇರಿ: ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಸಂಗೂರು ಗ್ರಾಮದ ವರದಾ ಶುಗರ್ಸ್‌ ಎಂಪಾಯ್ಲಿಸ್ ಅಸೋಸಿಯೇಶನ್‌ನ ಕಾರ್ಮಿಕರು ಕಾರ್ಖಾನೆ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದರು.

ಗ್ರಾಮದ ಬೈಲ ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಕಾರ್ಮಿಕರು, ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಕಾರ್ಖಾನೆಗೆ ಆಗಮಿಸಿದರು. ಕಾರ್ಖಾನೆ ಎದುರು ಹಾಕಿದ ಪೆಂಡಾಲ್‌ನಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನಾ ಧರಣಿ ಆರಂಭಿಸಿದರು.

ಎಂಪ್ಲಾಯೀಸ್ ಅಸೋಸಿಯೇಶನ್ ಗೌರವಾಧ್ಯಕ್ಷ ವಿ.ಜಿ. ಮತ್ತಿಹಳ್ಳಿ ಮಾತನಾಡಿ, ರೈತರ ಸಹಕಾರದೊಂದಿಗೆ ಇದ್ದಾಗ ಒಂದು ರೀತಿಯ ಸಮಸ್ಯೆ ಎದುರಿಸಿದ ಕಾರ್ಮಿಕರು ಈಗ ಖಾಸಗಿಯವರಿಗೆ ಗುತ್ತಿಗೆ ನೀಡಿದ ಮೇಲೆಯೂ ಸಮಸ್ಯೆ ಅನುಭವಿಸಬೇಕಾಗಿದೆ. ಆಡಳಿತ ಮಂಡಳಿಯಾಗಲಿ, ಗುತ್ತಿಗೆದಾರರಾಗಲಿ ಕಾರ್ಮಿಕರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಬದಲಾಗಿ ಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಕಾರ್ಮಿಕರ ರಾಜೀನಾಮೆ ಅಂಗೀಕರಿಸಿದ ಕ್ರೋಢಿಕೃತ ನೌಕರರ ಗ್ರಾಚ್ಯುಟಿ ವೇತನ ಬಾಕಿ ಪಾವತಿಸಬೇಕು, 9 ಜನ ನೌಕರರು ನೀಡಿದ ರಾಜೀನಾಮೆ ಅರ್ಜಿಗಳನ್ನು ಅಂಗೀಕರಿಸಿ ಬಾಕಿ ಪಾವತಿಸಬೇಕು, 13 ಜನ ಕ್ರೋಡಿಕೃತ ನೌಕರರಿಗೆ ಕಡಿಮೆ ಹಾಜರಾತಿ ನೀಡಿದ್ದು ಅಂತಹವರನ್ನು ಪ್ರಸಕ್ತ ಹಂಗಾಮಿಗೆ ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದ ಅವರು, ಸಂಧಾನದ ಸಭೆಗಳ ತೀರ್ಮಾನದಂತೆ ರಾಜೀನಾಮೆ ನೀಡದೆ ಇರುವ ಬಾಕಿ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು, ಸದ್ಯ ಕೆಲಸ ಮಾಡುತ್ತಿರುವ ಕ್ರೋಢಿಕೃತ ನೌಕರರನ್ನು ಕ್ರೋಢಿಕೃತ ಆದೇಶದಂತೆ ಪರೀಕ್ಷಾವಧಿ ಮುಕ್ತಾಯಗೊಳಿಸಿ ಖಾಯಂ ಆದೇಶ ನೀಡಿ ವೇತನ ಆಯೋಗದಂತೆ ಸೌಲಭ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಆಡಳಿತ ಮಂಡಳಿ, ಗುತ್ತಿಗೆದಾರರು ಹಾಗೂ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾದರೂ ಯಾರೂ ತಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸಿಲ್ಲ. ಕೂಡಲೇ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾ ನಿರತ ಕಾರ್ಮಿಕರು ತಿಳಿಸಿದರು.

ಪ್ರತಿಭಟನೆಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ. ನೆಗಳೂರು, ಕಾರ್ಯಾಧ್ಯಕ್ಷ ಡಿ.ಪಿ. ಕೆಂಗೊಂಡ, ಉಪಾಧ್ಯಕ್ಷ ಬಿ.ವಿ. ಹುಲ್ಲಾಳ, ಎಸ್.ಎಸ್. ಶಿವಕುಮಾರ, ಎಸ್.ಟಿ. ಬ್ಯಾಡಗಿ, ಸಿ.ಎಂ. ಸಂಗೂರ, ಬಿ.ವಿ. ಪಾಟೀಲ, ಎಫ್.ಎಫ್. ತಿಮ್ಮಾಪುರ, ಎಚ್.ಡಿ. ಕೊಟ್ರಣ್ಣವರ, ಎಚ್.ಸಿ. ಪಾಟೀಲ, ಎಂ.ಎಸ್. ಪುಟ್ಟಣ್ಣವರ ಅಲ್ಲದೇ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

ಹೋರಾಟಕ್ಕೆ ಬೆಂಬಲ: ಹಲವಾರು ನಾಯಕರು, ರೈತ ಮುಖಂಡರು ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೋರಿಶೆಟ್ಟರ, ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.