ADVERTISEMENT

ಕುಮದ್ವತಿಗೆ ಪ್ರವಾಹ: ರಾಜ್ಯ ರಸ್ತೆ ಬಂದ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 6:45 IST
Last Updated 3 ಆಗಸ್ಟ್ 2013, 6:45 IST


ಹಾವೇರಿ: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಕಳೆದ 24 ಗಂಟೆ ಗಳಲ್ಲಿ 104.5 ಮಿ.ಮೀ ಮಳೆಯಾಗಿದೆ. 119 ಮನೆಗಳು ಭಾಗಶಃ ಕುಸಿದಿವೆ. ಕುಮುದ್ವತಿ ನದಿ ಪ್ರವಾಹದಿಂದ ಹಿರೇಕೆರೂರ ತಾಲ್ಲೂಕಿನ ಮಾಸೂರು, ತಿಪ್ಪಾಯಿಕೊಪ್ಪ ಗ್ರಾಮಗಳಿಗೆ ನೀರು ನುಗಿದೆ. ಗ್ರಾಮದ ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದ್ದು, ಎರಡು ಗಂಜಿ ಕೇಂದ್ರ ತೆರೆಯಲಾಗಿದೆ.

ಹಾವೇರಿ ತಾಲ್ಲೂಕಿನಲ್ಲಿ 41, ರಾಣೆ ಬೆನ್ನೂರನಲ್ಲಿ 8, ಬ್ಯಾಡಗಿಯಲ್ಲಿ 23, ಹಿರೇಕೆರೂರಲ್ಲಿ 27 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 20 ಮನೆಗಳು ಸೇರಿದಂತೆ ಒಟ್ಟು 118 ಮನೆಗಳು ಭಾಗಶಃ ಬಿದ್ದಿವೆ. ಯಾವುದೇ ಪ್ರಾಣಹಾನಿ ಸಂಭವಿ ಸಿದ ವರದಿಯಾಗಿಲ್ಲ.

ಕಳೆದ 24 ಗಂಟೆಗಳಲ್ಲಿ 104.5 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯ ಹಾವೇರಿ ತಾಲ್ಲೂಕಿನಲ್ಲಿ 6.6 ಮಿಮೀ, ರಾಣೆಬೆನ್ನೂರನಲ್ಲಿ 7.6, ಬ್ಯಾಡಗಿಯಲ್ಲಿ 24.7, ಹಿರೇಕೆರೂರಲ್ಲಿ 24.1 ಸವಣೂರ 13.4, ಶಿಗ್ಗಾವಿ  ತಾಲ್ಲೂಕಿ ನಲ್ಲಿ 18.00, ಹಾನಗಲ್ ತಾಲ್ಲೂಕಿನಲ್ಲಿ 26.2 ಮಿ.ಮೀ. ಮಳೆಯಾದ ವರದಿ ಯಾಗಿದೆ.

ಎರಡು ಗಂಜಿ ಕೇಂದ್ರ: ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಅಂಜನಾಪುರ ಜಲಾ ಶಯದಿಂದ ಶುಕ್ರವಾರ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾ ಗಿದ್ದು, ಕುಮದ್ವತಿ ನದಿಗೆ ಪ್ರವಾಹ ಬಂದಿದೆ. ಇದರಿಂದ ಹಿರೇಕೆರೂರ ತಾಲ್ಲೂಕಿನ ಮಾಸೂರು ಹಾಗೂ ತಿಪ್ಪಾಯಿಕೊಪ್ಪ ಗ್ರಾಮಗಳಿಗೆ ನೀರು ನುಗ್ಗಿದೆ.

ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಗ್ರಾಮದ ಜನರಿಗೆ ಉಪವಿಭಾಗಾಧಿಕಾರಿ ಕೆ.ಚನ್ನಬಸಪ್ಪ ಹಾಗೂ ಡಿವೈಎಸ್‌ಪಿ ಜಯಪ್ರಕಾಶ ಅವರು ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಸೂಚನೆ ಯಂತೆ ಗ್ರಾಮದ ಹಲವಾರು ಕುಟುಂಬ ಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಬೇರೆ ಯಾವ ವ್ಯವಸ್ಥೆ ಇಲ್ಲದ ಜನರಿ ಗಾಗಿ ಮಾಸೂರ ಗ್ರಾಮದ ಎತ್ತರದ ಪ್ರದೇಶದಲ್ಲಿ ಗಂಜಿ ಕೇಂದ್ರ ತೆರೆಯಲಾ ಗಿದ್ದು, ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿವೆ.

ಅಗತ್ಯಬಿದ್ದರೆ ಶನಿವಾರ ಇನ್ನಷ್ಟು ಗಂಜಿ ಕೇಂದ್ರಗಳನ್ನು ತೆರೆಯಲಾಗು ವುದು ಎಂದು ಉಪವಿಭಾಗಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದ್ದಾರೆ.

ಹಿರೇಕೆರೂರ ವರದಿ
ತಾಲ್ಲೂಕಿನಲ್ಲಿ ಕುಮದ್ವತಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿಯ ಉಭಯ ಬದಿಗಳಲ್ಲಿ ಸಾವಿರಾರು ಎಕರೆ ಬೆಳೆಗಳು ಜಲಾವೃತಗೊಂಡಿವೆ. ಬಾಗಲ ಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯಲ್ಲಿ ತಿಪ್ಪಾಯಿಕೊಪ್ಪ ಗ್ರಾಮದ ಸಮೀಪ ಕುಮದ್ವತಿ ನದಿಯು ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಪರಿಣಾಮ ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದು, ಸಂಚಾರ ಅಸ್ತವ್ಯಸ್ತ ಗೊಂಡಿದೆ.

ಶುಕ್ರವಾರ ಬೆಳಗಿನ ಜಾವದಿಂದ ಸೇತುವೆ ಮೇಲೆ ನೀರು ಹರಿಯಲಾ ರಂಭಿಸಿ ಕ್ರಮೇಣ ನೀರಿನ ಮಟ್ಟ 2 ಅಡಿಗಿಂತ ಹೆಚ್ಚಾದ ಪರಿಣಾಮ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರವನ್ನು ಸ್ಥಗಿತಗೊಳಿಸಿದರು. ಇದರಿಂದ ದೋಣಿಸಾಲು ಭಾಗದಲ್ಲಿ ರುವ ತಾಲ್ಲೂಕಿನ 20ಕ್ಕೂ ಅಧಿಕ ಹಳ್ಳಿಗಳು ಹಾಗೂ ಶಿಕಾರಿಪುರ ತಾಲ್ಲೂ ಕಿನ ಹಳ್ಳಿಗಳು ಹಿರೇಕೆರೂರ ತಾಲ್ಲೂಕಿನ ನೇರ ಸಂಪರ್ಕವನ್ನು ಕಡಿದುಕೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ಎದುರಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಹಿರಿಯ ಅಧಿ ಕಾರಿಗಳು ಹಾಗೂ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಸೂರು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತುರ್ತು ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಯು.ಬಿ.ಬಣಕಾರ, `ತಿಪ್ಪಾಯಿಕೊಪ್ಪ ಗ್ರಾಮದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿ ರುವ  ಸೇತುವೆ ತೀರಾ ಕೆಳಮಟ್ಟದಲ್ಲಿ ಇರುವುದರಿಂದ ಹೆಚ್ಚು ಮಳೆ ಬಿದ್ದಾಗ ಸೇತುವೆ ಮೇಲೆ ನೀರು ಹರಿದು ಪದೇ ಪದೇ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತಿದೆ. ಕಾರಣ ಸೇತುವೆಯ ಮಟ್ಟವನ್ನು ಎತ್ತರಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ' ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಕೆ.ಚನ್ನ ಬಸಪ್ಪ, ಡಿವೈಎಸ್‌ಪಿ ಜಯಪ್ರಕಾಶ ಅಕ್ಕರಕಿ, ತಹಸೀಲ್ದಾರ್ ಹನುಮಂತಪ್ಪ ಬಡದಾಳೆ, ತುಷಾರ ಹೊಸೂರ, ಮಲ್ಲಿಕಾರ್ಜುನ ಮಾಳಿಗೇರ,  ಎಂ.ಬಿ. ತುರಮರಿ ಗ್ರಾ.ಪಂ. ಅಧ್ಯಕ್ಷ ಚನ್ನಬಸಪ್ಪ ರಾಮಜ್ಜ ನವರ, ಮಾಜಿ ಅಧ್ಯಕ್ಷ ರಮೇಶ ನ್ಯಾಮತಿ, ಪಿಎಲ್‌ಡಿ ಬ್ಯಾಂಕ್ ಉಪಾ ಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ ಹಾಗೂ ಗ್ರಾ.ಪಂ. ಸದಸ್ಯರು ಈ ಸಂದರ್ಭದಲ್ಲಿದ್ದರು.

ರಟ್ಟೀಹಳ್ಳಿ ವರದಿ
ಸಮೀಪದ ಯಲಿವಾಳ ಸೇತುವೆ ಕುಮದ್ವತಿ ನದಿ ಪ್ರವಾಹದಲ್ಲಿ ಮುಳುಗಿ ಸಾರ್ವಜನಿಕರಿಗೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡಿತು. ಗುರು ವಾರ ಮಧ್ಯರಾತ್ರಿಯಿಂದ ಸೇತುವೆ ಮುಳುಗಡೆಯಾಗಿದ್ದು ಶುಕ್ರವಾರ ರಟ್ಟೀಹಳ್ಳಿ ಸಂತೆಗೆ ಬರಬೇಕಾಗಿದ್ದ ಜನತೆ ಭಾರಿ ಪ್ರಯಾಸಪಡಬೇಕಾಯಿತು.

ಈ ಸೇತುವೆ ಮೂಲಕ ಬಂದರೆ ರಟ್ಟೀಹಳ್ಳಿ ಕೇವಲ ಒಂದೂವರೆ ಕಿ.ಮೀ. ಆದರೆ ಸೇತುವೆ ಮುಳುಗಿದ್ದರಿಂದ ಜನರು ತುಂಗಾ ಮೇಲ್ದಂಡೆ ಕಾಲುವೆ ಮೂಲಕ ನಡೆದುಕೊಂಡು ಕಣವಿಸಿದ್ಗೇರಿ ರಸ್ತೆ ತಲುಪಿ ಅಲ್ಲಿಂದ ವಾಹನ ಹಿಡಿದುಕೊಂಡು 10 ಕಿ.ಮೀ. ಬಳಸಿ ಬರ ಬೇಕಾಗಿದೆ. ಯಲಿವಾಳ ಅಲ್ಲದೆ ಚಪ್ಪರ ದಹಳ್ಳಿ ಗ್ರಾಮಸ್ಥರೂ ಕೂಡಾ ಇದೇ ಪರಿಸ್ಥಿತಿ ಅನುಭವಿಸಬೇಕಾಗಿದೆ. ಶಾಲಾ ಕಾಲೇ ಜುಗಳಿಗೆ ಹೋಗಬೇಕಾದ ವಿದ್ಯಾರ್ಥಿ ಗಳು ರಜೆ ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.

ಯಲಿವಾಳ ಸೇತುವೆಯನ್ನು ಸ್ವಲ್ಪ ಎತ್ತರಕ್ಕೆ ಏರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಪ್ರತಿ ಸಲ ಕುಮದ್ವತಿ ನದಿಗೆ ಪ್ರವಾಹ ಬಂದಾಗ ಲೆಲ್ಲ ಯಲಿವಾಳ ಸೇತುವೆ ಮುಳುಗಡೆ ಯಾಗಿ ತೊಂದರೆಯಾಗುತ್ತದೆ ಎಂದು ಯಲಿವಾಳ ಗ್ರಾಮದ ಮಂಜುನಾಥ ಸೊರಟೂರ ತಿಳಿಸಿದ್ದಾರೆ.

ಚಿಕ್ಕಮೊರಬ ಬ್ಯಾರೇಜು ಕೂಡಾ ನದಿಯಲ್ಲಿ ಮುಳುಗಿದ ಕಾರಣ ಸಂಚಾ ರಕ್ಕೆ ಅಡಚಣೆ ಉಂಟಾಗಿದೆ. ಇಲ್ಲಿಂದ ಗ್ರಾಮಸ್ಥರು ನಡೆದುಕೊಂಡು ರಾಮ ತೀರ್ಥ ಮೂಲಕ ಮಾಸೂರ ರಸ್ತೆಗೆ ಬರಬೇಕಾಗಿದೆ. ಶಾಲೆ ಕಾಲೆಜುಗಳಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.