ADVERTISEMENT

ಕೇಂದ್ರದ ವಿರುದ್ಧ ಎಬಿವಿಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:37 IST
Last Updated 19 ಡಿಸೆಂಬರ್ 2012, 8:37 IST

ಹಾವೇರಿ: `ಕೇಂದ್ರ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದೆ' ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಸಿಂದಗಿ ಮಠದಿಂದ ಪ್ರತಿಭಟನೆ ಆರಂಭಿಸಿದ ಎಬಿವಿಪಿ ನಗರದ ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎವಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮರದಖಂಡಿ ಮಾತನಾಡಿ, ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಎಂಟೂವರೆ ವರ್ಷಗಳ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕುವ ಯತ್ನ ನಡೆಸಿದೆ.

ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಂತ್ರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದರ ಬದಲಾಗಿ ಮತ್ತೆ ಹೊಸ ಹೊಸ ಹಗರಣಗಳನ್ನು ಮಾಡಲು ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

  2ಜಿ ಸ್ಪೆಕ್ಟ್ರಂ ಟೆಲಿಕಾಂ ಹಗರಣವನ್ನು ಮುಚ್ಚಿಹಾಕಲು ಈ ಬಾರಿ ಕರೆಯಲಾದ ಟೆಂಡರ್‌ಗೆ ಯಾರೂ ಬಾರದ ರೀತಿಯಲ್ಲಿ ಷಡ್ಯಂತ್ರ ರೂಪಿಸಿ ಟೆಲಿಕಾಂ ಲೈಸೆನ್ಸ್‌ಗಳಿಗೆ ಬೇಡಿಕೆಯಿಲ್ಲ. ಒಂದು ವೇಳೆ ಲೈಸೆನ್ಸ್ ಗಳಿಗೆ ಬೇಡಿಕೆಯಿದ್ದರೆ ಬಹಳಷ್ಟು ಜನ ಟೆಂಡರ್‌ಗೆ ಅರ್ಜಿ ಸಲ್ಲಿಸಬೇಕಾಗಿತ್ತು ಎನ್ನುವ ಮೂಲಕ 2ಜಿ ಸ್ಪೆಕ್ಟ್ರಂ ಹಗರಣವನ್ನು ಮುಚ್ಚಿಹಾಕಲು ಯುಪಿಎ ಷಡ್ಯಂತ್ರ ರೂಪಿಸಿದೆ ಹಾಗೂ ಸಿಎಜಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ ಎಂದು ಅವರು ದೂರಿದರು.

ಇದಕ್ಕೆ ವಿರುದ್ಧವಾಗಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಲುಕಿಕೊಂಡಿರುವ ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್ ಇವರಿಗೆ ಪ್ರಮುಖ ಸಚಿವ ಹುದ್ದೆಗಳನ್ನು ನೀಡಿ ಬಡ್ತಿ ನೀಡಲಾಗಿದೆ. ಇದು ಕೇಂದ್ರ ಸರ್ಕಾರ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಯುಪಿಎ ಸರ್ಕಾರದ ಬೆಲೆ ಏರಿಕೆಯ ಪರಿಣಾಮದಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಎಫ್‌ಡಿಐಯನ್ನು ಸಣ್ಣ ಸಣ್ಣ ಕಿರಾಣಿ ವ್ಯಾಪಾರಿಗಳ ಕ್ಷೇತ್ರಕ್ಕೂ ವಿಸ್ತರಿಸುವುದರಿಂದ ಲಕ್ಷಾಂತರ ಬಡ, ಮದ್ಯಮ ಕಿರಾಣಿ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳಲಿದೆ.

ADVERTISEMENT

ಈ ಬಿಲ್‌ನ್ನು ಸಂಸತ್‌ನಲ್ಲಿ ಪಾಸ್‌ಮಾಡಲು ಬೇರೆ ಬೇರೆ ಪಕ್ಷಗಳ ಮೇಲೆ ಅನೈತಿಕ ಒತ್ತಡವನ್ನು ನಿರ್ಮಿಸಿ ಕಾಯಿದೆಯನ್ನು ಪಾಸ್ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಸಿಬಿಐಯನ್ನು ದುರ್ಬಳಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಕೇಂದ್ರ ಸರ್ಕಾರವು ಭ್ರಷ್ಟಾಚಾರದ ಹಗರಣ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಸಾಗರ ಅಂಗಡಿ, ಹನಮಂತ ಆಲದಕಟ್ಟಿ, ಮಹೇಶ ಲಮಾಣಿ, ಹನಮಂತಗೌಡ, ನಿಂಗಪ್ಪ ಲಮಾಣಿ, ಸೋಮನಗೌಡ ಅರಳಿಹಳ್ಳಿ, ಮಂಜುನಾಥ ಚೌಡಪ್ಪನವರ, ಅಸ್ಲಂ ಮಳಗಿ, ದೊಡ್ಡ ಬಸವಗೌಡ, ರಾಜೇಂದ್ರ ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.