ADVERTISEMENT

ಕೈ ಇಲ್ಲದಿದ್ದರೂ ದುಡಿಯುವ ಕೈಗಳಿಗೆ ಕೆಲಸ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:35 IST
Last Updated 5 ಡಿಸೆಂಬರ್ 2013, 8:35 IST

ಹಾನಗಲ್‌: ತನಗೆ ಕೈ ಇಲ್ಲವೆಂದು ಸುಮ್ಮನೆ ಕುಳಿತುಕೊಳ್ಳದೇ ಸ್ವತಃ ಕಂಪ್ಯೂಟರ್‌ ಸಂಸ್ಥೆಯನ್ನು ಹುಟ್ಟು ಹಾಕಿ, ಕೈ ಇಲ್ಲದಿದ್ದರೇ ಏನಾಯಿತು ದುಡಿಯುವ ಕೈಗಳಿಗೆ ಕೆಲಸ ನೀಡಲು ಸಾಧ್ಯ ಎಂಬುದನ್ನು ತೋರಿಸಿಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ ಹಾನಗಲ್‌ ಅಂಗವಿಕಲ ಯುವಕ.

ಹೌದು, ಹಾನಗಲ್‌ನ ರಾಯಲ್‌ಟೆಕ್‌ ಕಂಪ್ಯೂಟರ್‌ ಸಂಸ್ಥಾಪಕ ಪ್ರಶಾಂತ ಕಲಾಲ ಎಂಬುವವರೇ  ಮಾದರಿ ಯುವಕ.

ಪ್ರಶಾಂತ 12 ವರ್ಷದವನಿದ್ದಾಗಲೇ ವಿಧಿಯ ಆಟಕ್ಕೆ ಬಲಿಯಾಗಿ ಅಪಘಾತವೊಂದರಲ್ಲಿ ತನ್ನ ಎಡಗೈಯನ್ನು ಸಂಪೂರ್ಣ ಕಳೆದುಕೊಂಡರು. ಆರಂಭದಲ್ಲಿ ಕೈ ಹೋದ ಮೇಲೆ ಜೀವನವೇ ಮುಗಿಯುತು ಎಂದು ಎದೆಗುಂದಿದರೂ, ನಂತರದಲ್ಲಿ ಕೈ ಇಲ್ಲದಿದ್ದರೇ ಏನಾಯಿತು. ತಲೆಯಿದೆಯಲ್ಲ ಎಂದು ತಮ್ಮಷ್ಟಕ್ಕೆ ತಾವೇ ಸಮಾಧಾನ ಪಟ್ಟುಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸಿದರು.

ಅದೇ ಸಮಾಧಾನದಿಂದಲೇ ಪಿಯುಸಿ, ಡಿಎಡ್‌ವರೆಗೆ ವಿದ್ಯಾಭ್ಯಾಸ ಮಾಡಿದ ಇವರು  ಮೂರು ವರ್ಷ ಯಾವುದೇ ಉದ್ಯೋಗವಿಲ್ಲದೇ   ಅಲೆದಾಡಬೇಕಾಯಿತು. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಸರ್ಕಾರಿ ಉದ್ಯೋಗಕ್ಕಾಗಿ ಕಾದು ಕುಳಿತುಕೊಳ್ಳದೇ, ಕಂಪ್ಯೂಟರ್‌ ತರಬೇತಿ ಪಡೆದು ಎಲ್ಲಿಯಾದರೂ ಕೆಲಸ ಮಾಡಬೇಕು ಎಂದುಕೊಂಡಿದ್ದರು.

ತಮ್ಮ ಯೋಚನೆಯಂತೆ ಕಂಪ್ಯೂಟರ್‌ ತರಬೇತಿ ಪಡೆದರು. ನಂತರ ಒಂದು ಕೈ ಇಲ್ಲದ ತಮಗೆ ಯಾರೂ ತಾನೆ ಉದ್ಯೋಗ ನೀಡುತ್ತಾರೆ. ಅದರ ಬದಲು ತಾವೇ ಕಂಪ್ಯೂಟರ್‌ ಸಂಸ್ಥೆ ತೆಗೆದರೆ, ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡಲು ಸಾಧ್ಯ ಎಂಬುದನ್ನರಿತು. ಆ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದರು.

ಮನೆಯ ಆರ್ಥಿಕ ಸಂಕಷ್ಟಗಳ ನಡುವೆ 2 ಕಂಪ್ಯೂಟರ್‌ ಖರೀದಿಸಿ 2008 ರಲ್ಲಿ ಸಂಸ್ಥೆ ಆರಂಭಿಸಿದಾಗ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ  ಈಗ 150 ಕ್ಕೂ ಅಧಿಕ. ಒಂದು ಕೈ ಇಲ್ಲದಿರುವ ವಿಕಲತೆಯಿಂದ ವಿಚಲಿತರಾಗದ 29 ರ ಹರೆಯದ ಪ್ರಶಾಂತ ಕಲಾಲ ಬಳಿಯಲ್ಲಿ ತರಬೇತಿ ಪಡೆದವರು ದುಡಿಮೆಯ ದಾರಿ ಯಲ್ಲಿದ್ದಾರೆ. ಮೂವರಿಗೆ ತಮ್ಮ್ನಲ್ಲೆ ಕೆಲಸ ನೀಡುವ ಮೂಲಕ ಯುವ ಸಮೂಹಕ್ಕೆ ಉದ್ಯೋಗದ ಮಾರ್ಗದರ್ಶಿಯಾಗಿದ್ದಾರೆ. ಪ್ರಶಾಂತ ಅವರಿಗೆ ಸರ್ಕಾರದ ಸೌಲಭ್ಯಗಳ ಸುಳಿವಿಲ್ಲದೇ ಇದ್ದರೂ, ಸ್ವಂತ ಶ್ರಮದಿಂದ ಈಗ ಸಮೀಪದ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಮತ್ತು ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿ, ಆಡೂರ ಗ್ರಾಮಗಳಲ್ಲಿ ಸಂಸ್ಥೆಯ ಶಾಖೆಗಳನ್ನು ತೆರೆದು ಕಂಪ್ಯೂಟರ್‌ ಜ್ಞಾನ ನೀಡುವ ಮೂಲಕ ಬದುಕು ಕಟ್ಟಿಕೊಳ್ಳುವ ಭರವಸೆ ನೀಡುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.