ಹಾವೇರಿ: ಮಳೆಗಾಲ ಆರಂಭವಾದರೂ ನಗರದಲ್ಲಿ ಸಮರ್ಪಕ ಕುಡಿಯುವ ನೀರು ಒದಗಿಸದ ನಗರಸಭೆ ಕಾರ್ಯವೈಖರಿ ಖಂಡಿಸಿ ಹಾಗೂ ಕೂಡಲೇ ಕುಡಿಯುವ ಸರಬರಾಜಿಗೆ ಒತ್ತಾಯಿಸಿ ಶಿವಾಜಿನಗರ, ಹೊಸನಗರ, ಮಕಾನಗಲ್ಲಿ, ಶಿವಯೋಗೀಶ್ವರ ನಗರದ ನಿವಾಸಿಗಳು ಗುರುವಾರ ನಗರಸಭೆ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ನಗರಸಭೆ ಮಾಜಿ ಸದಸ್ಯ ಬಾಬುಸಾಬ ಮೋಮಿನಗಾರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ ನಿವಾಸಿಗಳು, ನೀರಿದ್ದರೂ ನೀರು ಬಿಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಬಾಬುಸಾಬ ಮೋಮಿನಗಾರ ಮಾತನಾಡಿ, ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ತುಂಗಭದ್ರಾ ನದಿ ತುಂಬಿದೆ. ಆದರೂ, ಕಳೆದ 20 ದಿನಗಳಿಂದ ನಮ್ಮ ಬಡಾವಣೆಗಳಿಗೆ ನೀರು ಬಂದಿಲ್ಲ. ನೀರಿದ್ದರೂ ಏಕೆ ನೀರು ಬಿಡುತ್ತಿಲ್ಲ ಎಂಬುದಕ್ಕೆ ಅಧಿಕಾರಿಗಳ ಬಳಿ ಯಾವುದೇ ಉತ್ತರವಿಲ್ಲ. ನಗರಸಭೆ ಸಿಬ್ಬಂದಿಗೆ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು.
ಯಾವಾಗ ಕೇಳಿದರೂ ಪೈಪ್‌ಲೈನ್, ಮೋಟಾರ್ ದುರಸ್ತಿಯಿದೆ. ನಾಲ್ಕೈದು ದಿನಗಳಲ್ಲಿ ದುರಸ್ತಿ ಮಾಡಿಸಿ ನೀರು ಬಿಡುವುದಾಗಿ ಹೇಳುತ್ತಾರೆ. ಆದರೆ, ಯಾವಾಗ ದುರಸ್ತಿ ಮಾಡಿಸುತ್ತಾರೆ ಎಂಬುದು ಗೊತ್ತಿಲ್ಲ. ಆದರೆ. ಜನರು ಮಾತ್ರ ನೀರಿಲ್ಲದೇ ಪರಿತಪಿಸಬೇಕಾಗಿದೆ ಎಂದ ಅವರು, ಕೂಡಲೇ ನೀರು ಪೂರೈಕೆ ಆರಂಭಿಸದಿದ್ದರೆ, ನಗರಸಭೆ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ನೀರು ಪೂರೈಕೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ರಿಯಾಜ್ ಶಿಡಗನಾಳ, ಸಾಜೀದ್ ದಾರುಗಾರ, ಅಮಾನ್ ಗೋಲಿಬಾರ್, ಮಹ್ಮದ ಚಿಕ್ಕೋಡಿ, ಕಾಮತ ಮತ್ತೂರ, ರವಿ ಆನವಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.