ADVERTISEMENT

ಗಣಪತಿ ಹೋದ, ಜೋಕುಮಾರ ಬಂದ

ಜೋಕುಮಾರ ಸ್ವಾಮಿಯ ಶಿಲಾ ಮೂರ್ತಿ ಹೊತ್ತು, ಊರೂರು ಅಲೆಯುವ ಮಹಿಳೆಯರು

ವಿನಾಯಕ ಭೀಮಪ್ಪನವರ
Published 26 ಸೆಪ್ಟೆಂಬರ್ 2015, 6:25 IST
Last Updated 26 ಸೆಪ್ಟೆಂಬರ್ 2015, 6:25 IST

ರಟ್ಟೀಹಳ್ಳಿ: ಅಡ್ಡ ಅಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ 
ಗೊಡ್ಡುಗಳೆಲ್ಲ ಹಯನಾಗಿ
ಈ ಊರ ರಾಶಿಯ ಮೇಲೆ ಸಿರಿ ಬಂದು
ಜೋಕುಮಾರ ನಿನ್ನ ಕಾಲಿಗೆ ಹರಳಿಲ್ಲ
ರಾಶಿ ಮೇಲೆ ಸಿರಿ ಬಂದು
ನೀ ಹುಟ್ಟಿ ಏಳು ದಿನಕ್ಕ
ಪಟ್ಟಣ ತಿರುಗ್ಯಾನ ಜೋಕುಮಾರ !

ಈ ಮೇಲಿನ ಜನಪದ ಗೀತೆ ಪಟ್ಟಣದ ಬೀದಿ ಬೀದಿಗಳಲ್ಲಿ ಕೇಳಿ ಬರುತ್ತಿದೆ. ಗಣೇಶ ವಿಸರ್ಜನೆ ನಂತರ ಅಷ್ಟಮಿಯಂದು ಮೂಲಾ ನಕ್ಷತ್ರದಲ್ಲಿ ಜನಿಸಿ ಬರುವ ಜೋಕುಮಾರಸ್ವಾಮಿ ಪಟ್ಟಣದಾದ್ಯಂತ ಕಂಡು ಬರುತ್ತಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಎಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ.

ಪುರಾಣಗಳ ಪ್ರಕಾರ ಭಾದ್ರಪದ ಮಾಸವು ಜನತೆಗೆ ಭವಿಷ್ಯದ ಭದ್ರ ಅಡಿಪಾಯ ಹಾಕುವ ಮಾಸವಾಗಿದೆ. ಮಳೆ ಬೆಳೆ ಚೆನ್ನಾಗಿ ಬರುವ ಕಾಲವದು. ಈ ಮಾಸದಲ್ಲಿ ಗಣೇಶ, ತನ್ನ ತಂದೆ ಶಿವನ ಆಜ್ಞಾನುಸಾರ ಭೂಲೋಕ ಸಂಚಾರ ಮಾಡುತ್ತ ಬರುತ್ತಾನೆ.  ಸಂಚಾರ ಸಮಯದಲ್ಲಿ ಗಣೇಶನಿಗೆ ಜನರು ತನ್ನ ಆರಾಧನೆಯನ್ನು ಸಂತೋಷದಿಂದ ಆಚರಿಸುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಜನರು ಅತ್ಯಂತ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ ಎಂದು ಶಿವನಿಗೆ ವರದಿ ಒಪ್ಪಿಸುತ್ತಾನೆ. ಶಿವನಿಗೆ ಅಪಾರ ಆನಂದವಾಗುತ್ತದೆ. ಆಗ ಅಲ್ಲಿಯೇ ಇದ್ದ ಸುಬ್ರಹ್ಮಣ್ಯ ಮಾತ್ರ ಗಣೇಶನ ಮಾತನ್ನು ಒಪ್ಪುವುದಿಲ್ಲ.  ಜನರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ ಎಂದು ಹೇಳುತ್ತಾನೆ. ಆಗ ಶಿವನು ಸುಬ್ರಹ್ಮಣ್ಯನಿಗೆ ಭೂಲೋಕ ಸಂಚಾರ ಮಾಡಲು ಅಪ್ಪಣೆ ಕೊಡುತ್ತಾರೆ. ಅದರ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ  ಜೋಕುಮಾರಸ್ವಾಮಿಯ ಅವತಾರ ತಾಳಿ ಭೂಲೋಕಕ್ಕೆ ಬರುತ್ತಾನೆ.

ಕಾಕತಾಳೀಯವೆನ್ನುವಂತೆ ಜೋಕುಮಾರ ಭೂಮಿಗೆ ಬಂದಾಗ ಮಳೆ ಇರುವುದಿಲ್ಲ. ಗಣೇಶ ಬಂದಾಗ ಇದ್ದ ಜಿಟಿಜಿಟಿ ಮಳೆ ಮಾಯ ವಾಗಿರುತ್ತದೆ. ಪ್ರಸ್ತುತ ವಾತಾವರಣ ಗಮನಿಸಿದಾಗ ಇದೇ ಸನ್ನಿವೇಶ ನಮ್ಮ ಮುಂದಿದೆ. ಇದು ಸಂಪ್ರದಾಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಜೋಕುಮಾರಸ್ವಾಮಿಯ ಶಿಲಾ ಮೂರ್ತಿ ಯನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಊರೂರು ಅಲೆಯುತ್ತಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜನರು ಸಾಕಷ್ಟು ಖರ್ಚು ಮಾಡಿ ಹೈರಾಣಾಗಿರುತ್ತಾರೆ. ಜೋಕುಮಾರಸ್ವಾಮಿಗೆ ಕಾಳು, ಬೆಣ್ಣೆ, ತುಪ್ಪ ನೀಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ, ಜನರು ಸಂಕಷ್ಟದಲ್ಲಿದ್ದಾರೆ ಎಂದು ಶಿವನಿಗೆ ವರದಿ ಒಪ್ಪಿಸುತ್ತಾನೆ. ಶಿವ ಮತ್ತೆ ಮಳೆ ಸುರಿಸಲು ಪ್ರಾರಂಭಿಸುತ್ತಾನೆ. ಹೀಗೆ ಅನಾದಿ ಕಾಲದಿಂದ ನಡೆದುಕೊಂಡ ಪದ್ಧತಿ ಇಂದಿಗೂ ಮುಂದುವರೆದಿದೆ.

ರಟ್ಟೀಹಳ್ಳಿ ಮತ್ತು ಕಡೂರ ಗ್ರಾಮಗಳಲ್ಲಿ ಈ ಪದ್ಧತಿಯನ್ನು ಆಚರಿಸಿ ಕೊಂಡು ಬರುವ ಅನೇಕ ಕುಟುಂಬಗಳು ಇಂದಿಗೂ ಇವೆ. ಜೋಕುಮಾರ ಸ್ವಾಮಿಯ ಶಿಲಾ ಮೂರ್ತಿಯಿಲ್ಲದವರು ಮಣ್ಣಿನ ಮೂರ್ತಿಯನ್ನು ಮಾಡಿಕೊಂಡು ಬುಟ್ಟಿಯಲ್ಲಿ ಇಟ್ಟು ಬೇವಿನ ಸೊಪ್ಪಿನಿಂದ ಅಲಂಕಾರ ಮಾಡಿ ಮನೆಮನೆಗೆ ತೆರಳಿ ಕಾಣಿಕೆ ಕೇಳುತ್ತಾರೆ. ಸೋಮವಾರ ಜರುಗುವ ಅನಂತನ ಹುಣ್ಣಿಮೆಯಂದು ಜೋಕುಮಾರಸ್ವಾಮಿ ಅವಸಾನ ಹೊಂದಿ ತನ್ನ ಸ್ವಸ್ಥಾನ ಸೇರುತ್ತಾನೆ.

ಅಂದಿನಿಂದ ಮತ್ತೆ ಮಳೆ ! ಮಳೆ ! ಮಳೆ
ಊರೂರು ಅಲೆದರೂ ನಾಲ್ಕು ಧಾನ್ಯ ದೊರೆಯುವುದಿಲ್ಲ. ಈ ವರ್ಷ ಬರಗಾಲ ಬೇರೆ ಇರುವುದರಿಂದ, ಜನರು ಕೈ ಬಿಚ್ಚಿ ಏನನ್ನೂ ನೀಡುವುದಿಲ್ಲ ಎಂದು ರತ್ನವ್ವ ಬಾರ್ಕಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.