ADVERTISEMENT

ಚನ್ನವೀರಶ್ರೀಗಳ ಬದುಕು ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 8:10 IST
Last Updated 12 ಜೂನ್ 2012, 8:10 IST

ಅಕ್ಕಿಆಲೂರ: ಮಠಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಸೇವೆ ಅಪಾರವಾದುದಾಗಿದೆ. ಭಕ್ತಿ, ಕಾಯಕ, ದಾಸೋಹ ಮತ್ತು ಸಮಾನತೆಗಳಂತಹ ಮೌಲಿಕ ತತ್ವಗಳ ಆಧಾರದ ಮೇಲೆ ಸಮಾಜವನ್ನು ಕಟ್ಟಿದ ಹಿರಿಮೆ ಮಠಾಧೀಶರಿಗೆ ಸಲ್ಲಬೇಕಿದೆ. ಈ ಭಾಗದಲ್ಲಿ ಅನುಷ್ಠಾನದ ಮೂಲಕವೇ ಭಕ್ತರ ಮನೆ, ಮನ ಬೆಳಗಿದ ಶ್ರೇಯಸ್ಸು ಲಿಂ.ಚನ್ನವೀರ ಶ್ರೀಗಳದ್ದಾಗಿದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಹೇಳಿದರು.
ಇಲ್ಲಿಯ ಚನ್ನವೀರೇಶ್ವರ ವಿರಕ್ತಮಠ ದಲ್ಲಿ ಆಯೋಜಿಸಿದ್ದ ಮೌನ ತಪಸ್ವಿ ಲಿಂ.ಚನ್ನವೀರ ಶ್ರೀಗಳ ಚತುರ್ಥ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿವಯೋಗದಲ್ಲಿ ನಂಬಿಕೆ ಇಟ್ಟಿದ್ದ ಚನ್ನವೀರಶ್ರೀಗಳು ಲಿಂಗ ಮೋಹಿ ಗಳಾಗಿದ್ದರು. ವಿವಿಧ ಭಾಗಗಳಲ್ಲಿ ಕಠೋರ ಅನುಷ್ಠಾನ ಕೈಗೊಳ್ಳುವ ಮೂಲಕ ಭಕ್ತರ ಮನ ಬೆಳಗಿದ ಚನ್ನವೀರ ಶ್ರೀಗಳ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಎಂದು ವಿಷಾದಿಸಿದ ಅವರು, ಸಮಾಜ ಸೇವೆಯಲ್ಲಿ ಅಪಾರ ವಿಶ್ವಾಸವನ್ನು ಇಟ್ಟಿರುವ ಶಿವಬಸವ ಶ್ರೀಗಳು ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷರಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಶ್ರೀಗಳು ಮಾತನಾಡಿ, ಒಂದು ಸ್ಪಷ್ಟ ವಾದ ಗುರಿಯನ್ನು ಹೊಂದಿ ಸಮಾಜ ಮುನ್ನೆಡೆಸುವುದು ಕಷ್ಟಸಾಧ್ಯದ ಕೆಲಸವಾಗಿದೆ.

ADVERTISEMENT

ಯುಗಪುರುಷರಿಗೆ, ಮಹಾ ಮಹಿಮರಿಗೆ ಮತ್ತು ಅಂತಃ ಸತ್ವದಲ್ಲಿ ಶ್ರದ್ಧೆ, ಕಳಕಳಿ, ಸಮಾಜಮುಖಿ ಚಿಂತನೆ ಇದ್ದವರಿಗೆ ಮಾತ್ರ ಸಮಾಜವನ್ನು ಮುನ್ನೆಡೆಸುವುದು ಸುಲಭವಾಗಲಿದೆ.  ಎಂದರು.

ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿದ ನಿವೃತ್ತ ಡಿ.ಎಚ್.ಒ. ಡಾ.ಐ.ವೈ.ಮಾಳೋದೆ ಮಾತನಾಡಿ, ಧರ್ಮ ಎನ್ನುವುದು ಮಾನವ ಜನಾಂಗದ ಅವಿಭಾಜ್ಯ ಅಂಗವೆನಿಸಿದೆ. ಧರ್ಮದಿಂದ ಸಕಲ ವಿಧದಿಂದಲೂ ಶಾಂತಿ ಲಭಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುವ ಧರ್ಮ ಬಂಧುತ್ವ ಹಾಗೂ ಸಹಬಾಳ್ವೆಯನ್ನು ಬಿತ್ತಲಿದೆ ಎಂದು ಹೇಳಿದ ಅವರು ಸಮಾಜ ಸೇವಾ ದೀಪ್ತಿಯಿಂದ ಭಕ್ತರ ಮನ ಬೆಳಗಿರುವ ಲಿಂ.ಚನ್ನವೀರ ಶ್ರೀಗಳು ಸದಾಕಾಲಕ್ಕೂ ಪ್ರಾತಸ್ಮರಣೀಯರು ಎಂದರು. ತಮ್ಮ ಸೇವೆಯನ್ನು ಗುರುತಿಸಿ ಸತ್ಕಾರ ನೀಡಿದ ಶ್ರೀಮಠದ ಸದ್ಭಕ್ತ ಮಂಡಳಿಗೆ ಚಿರಋಣಿಯಾಗಿರುವುದಾಗಿ ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಶಾಂತಕುಮಾರ ದೇವರು ಕಾರ್ಯಕ್ರಮ ದ ಸಮ್ಮುಖ ವಹಿಸಿದ್ದರು. ಹಾನಗಲ್ಲ ತಾಲ್ಲೂಕಾ ಶಿಕ್ಷಣ ಸಂಘದ ಅಧ್ಯಕ್ಷ ಸಿ.ಸಿ.ಬೆಲ್ಲದ, ವಾಣಿಜ್ಯೋದ್ಯಮಿ ಜಿ.ಬಿ.ಸಾಲವಟಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ ಧಾರವಾಡ, ಮಾಜಿ ಅಧ್ಯಕ್ಷ ಎಸ್.ಎಸ್.ಮುಚ್ಚಂಡಿ, ಎಸ್.ಬಿ.ತುಪ್ಪದ, ಪಿ.ಯು.ಬೆಲ್ಲದ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎನ್.ಪಿ.ಪಾವಲಿ, ನಿವೃತ್ತ ಶಿಕ್ಷಕ ಜಿ.ಬಿ.ಕೋಟಿ, ಜಿ.ಎಂ.ಹಿರೇಮಠ, ನೀಲಮ್ಮ ವಿರುಪಣ್ಣನವರ, ಸುಜಾತಾ ಕೊಲ್ಲಾವರ, ಶಿವಬಸವ ಕಟಗಿ, ವೀರಭದ್ರಪ್ಪ ಉಪ್ಪಿನ, ಶಿದ್ಧಲಿಂಗೇಶ ತುಪ್ಪದ, ಬಸವರಾಜ ಕಂಬಾಳಿ ಸೇರಿದಂತೆ ಇನ್ನೂ ಹಲವರು ಈ ವೇಳೆಯಲ್ಲಿ ಪಾಲ್ಗೊಂಡಿದ್ದರು.

ದೀಪಾ ವಿರುಪಣ್ಣನವರ ಪ್ರಾರ್ಥನೆ ಹಾಡಿದರು. ಸಂಗಮೇಶ ಮಿರ್ಜಿ ಸ್ವಾಗತ ಕೋರಿದರು. ಚನ್ನವೀರೇಶ್ವರ ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಎನ್.ಸಿ.ಪಾವಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರದೀಪ ಮಹೇಂದ್ರಕರ ನಿರೂಪಿಸಿದರು. ಪ್ರವೀಣ ಅಪ್ಪಾಜಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.