ADVERTISEMENT

ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಗ್ರಹಣ?

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:23 IST
Last Updated 8 ಜುಲೈ 2013, 5:23 IST

ರಾಣೆಬೆನ್ನೂರು: ವಾಣಿಜ್ಯನಗರಿ ರಾಣೆಬೆನ್ನೂರಿನ ಜನಸಂಖ್ಯೆ 1.5 ಲಕ್ಷಕ್ಕೂ ಅಧಿಕ. ಘನ ತ್ಯಾಜ್ಯ ಕೂಡ ಟನ್‌ಗಟ್ಟಲೇ ಸಂಗ್ರಹವಾಗುತ್ತಿದೆ. ಬೆಳಿಗ್ಗೆ ನಗರಸಭೆ ವಾಹನದಲ್ಲಿ ಪರಿಸರ ಜಾಗೃತಿ ಮೂಡಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿರುವುದು ಸ್ವಾಗತಾರ್ಹ.

ಆದರೆ ಸ್ಟೇಶನ್ ರಸ್ತೆಯ ವರ್ತಕರ ಸಂಘದ ಎದುರಿಗೆ ಇರುವ ಕಸದ ಡಬ್ಬಿಯಲ್ಲಿ ವಿವಿಧ ವಾರ್ಡ್‌ಗಳಿಂದ ಸಂಗ್ರಹಿಸಿದ ಕಸ ತಂದು ಹಾಕುವುದರಿಂದ ಗಬ್ಬು ವಾಸನೆ ಬೀರುತ್ತದೆ. ಕಸದ ಡಬ್ಬಿಯನ್ನು ಡಂಪರ್ ಪ್ಲೇಸರ್‌ನಿಂದ ಸಾಗಿಸಲು ವಾಹನವಿದ್ದರೂ ನಿಗದಿತವಾಗಿ ಸಾಗಿಸಲು ನಗರಸಭೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಈಗ ಮಳೆಗಾಲವಾಗಿದ್ದರಿಂದ ಕಸ ಕೊಳೆತು ನಾರುತ್ತದೆ. ಅಲ್ಲದೆ ಕಂಟೇನರ್ ತುಂಬಿ ತ್ಯಾಜ್ಯ ಕೆಳಗೆ ಚಲ್ಲುವುದರಿಂದ ಸಾಂಕ್ರಾಮಿಕ ರೋಗಳು ಹರಡುವ ಸಾಧ್ಯತೆಯನ್ನು ಇದೆ. ರೈಲು ನಿಲ್ದಾಣದ ಪಕ್ಕದಲ್ಲಿಯೇ ಇರುವುದರಿಂದ ಪ್ರಯಾಣಿಕರು ಈ ಸ್ಥಳದಲ್ಲಿ ಮೂಗು ಮುಚ್ಚಿಕೊಂಡೇ ಹೋಗುವ ಅನಿವಾರ್ಯತೆ ಇದೆ.

ನಗರದ ಸುಮಾರು ಏಳು ವಾರ್ಡ್‌ಗಳಿಂದ ಸಂಗ್ರಹಿಸಿದ ಕಸವನ್ನು ಇಲ್ಲಿ ತಂದು ಹಾಕುವುದರಿಂದ ಕಂಟೇನರ್ ಬೇಗನೆ ತುಂಬುತ್ತದೆ. ಈ ಕುರಿತು ಸಂಬಂಧಿಸಿದ ವಾರ್ಡ್ ಸದಸ್ಯರಿಗೆ ಸಮಸ್ಯೆಯನ್ನು ವಿವರಿಸಿದರೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಬಂದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿ ಜಾರಿಕೊಂಡಿದ್ದಾರೆ.

`ಮನೆ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ವಾರಗಟ್ಟಲೇ ಈ ರೀತಿ ಸಂಗ್ರಹಿಸುವುದರಿಂದ ತೀವ್ರ ತೊಂದರೆಯಾಗುತ್ತದೆ. ಕಸವನ್ನು ಟ್ರ್ಯಾಕ್ಟರ್ ಮೂಲಕ ನೇರವಾಗಿ ಹುಲ್ಲತ್ತಿಯ ಘನ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸಾಗಿಸಬೇಕು ಅಥವಾ ಕಸದ ಡಬ್ಬಿಯನ್ನು ಪ್ರತಿ ದಿನ ಬದಲಾವಣೆ ಮಾಡಬೇಕು' ಎಂದು ವರ್ತಕ ಪ್ರಶಾಂತ ಜೈನ ಆಗ್ರಹಿಸಿದ್ದಾರೆ.

ಈ ಬಗ್ಗೆ ಅನೇಕ ಬಾರಿ ನಗರಸಭೆ ಸಿಬ್ಬಂದಿ ಮತ್ತು ಗುತ್ತಿಗೆದಾರಿಗೆ ದೂರವಾಣಿ ಮೂಲಕ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಸದ ಕಂಟೇನರ್ ಸ್ಥಳಾಂತರಿಸದಿದ್ದರೆ ಇಲ್ಲಿನ ನಿವಾಸಿಗಳು ಬೀದಿಗಳೀದು ಹೋರಾಟ ಮಾಡುವುದು ಅನಿವಾರ್ಯ ಎಂದು ನಿವಾಸಿಯೊಬ್ಬರು. 
- ಮುಕ್ತೇಶ ಕೂರಗುಂದಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.