ಸವಣೂರ: `ಈ ಬಾರಿಯೂ `ಕನಕ' ಬಿಟಿ ಹತ್ತಿ ಬೀಜಕ್ಕೆ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಬೀಜ ಮಾರಾಟ ನಡೆದಿದೆ. ಕಾಳ ಸಂತೆಯಲ್ಲಿ ಬೀಜ ಮಾರಾಟ ಕೈಗೊಳ್ಳುತ್ತಿರುವ ವರ್ತಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು' ಎಂದು ಬೊಮ್ಮಾಯಿ ಸೂಚಿಸಿದರು.
ತಾ.ಪಂ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿ ಲಭ್ಯವಾಗಲಿರುವ 5 ಕೋಟಿ ರೂಪಾಯಿ ಅನುದಾನದ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಶಾಸಕ ಬಸವರಾಜ ಬೊಮ್ಮಾಯಿ ಸೂಚಿಸಿದರು.
`ತಾಲ್ಲೂಕಿನ ಎಲ್ಲ ಗ್ರಾಮಗಳ ಸರ್ವೆ ಮಾಡಿ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ 10 ದಿನಗಳ ಒಳಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ. ಅನೇಕ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ. ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ನಿರಂತರ ಜಾಗೃತಿ ವಹಿಸಿ. ಕಾಮಗಾರಿಗಳ ವಿಷಯದಲ್ಲಿ ಗುತ್ತಿಗೆದಾರರಂತೆ ವರ್ತಿಸದೆ ನಿಮ್ಮ ಕರ್ತವ್ಯ ನಿರ್ವಹಿಸಿ' ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಪೌಷ್ಟಿಕ ಆಹಾರದ ಸಮಸ್ಯೆ ಇರುವ ತಾಲ್ಲೂಕಿನ 300ಕ್ಕೂ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿರುವ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು. ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, `ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರದೊಂದಿಗೆ ವಿಶೇಷ ಕಾರ್ಯಕ್ರಮದ ಅಡಿ ಹಾಲು ಮೊಟ್ಟೆಗಳ ವಿತರಣೆಯನ್ನು ಕೈಗೊಳ್ಳಬೇಕು' ಎಂದರು.
`ನೆರೆ ಹಾವಳಿಗೆ ತುತ್ತಾಗುವ ತಾಲ್ಲೂಕಿನ ನದಿನೀರಲಗಿ ಗ್ರಾಮವನ್ನು ನ್ಯಾಯಾಲಯದ ಆದೇಶದಂತೆ ಸ್ಥಳಾಂತರಿಸಲು ನಿವೇಶನ ಗುರುತಿಸಬೇಕು. ಒಂದು ತಿಂಗಳ ಒಳಗಾಗಿ ಪಟ್ಟಾ ವಿತರಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು' ಶಾಸಕರು ಸೂಚಿಸಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. `ಅಧಿಕಾರಿಗಳಿಗೆ ಸೂಚನೆ ನೀಡುವುದನ್ನು ಬಿಟ್ಟು ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು' ಕೆಲ ಸದಸ್ಯರು ಆಗ್ರಹಿಸಿದರು.
ತಾ.ಪಂ. ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷೆ ಖೈರುನೀಸಾ ಮೋಮೀನ, ಜಿ.ಪಂ. ಸದಸ್ಯರಾದ ಶೋಭಾ ನಿಸ್ಸೀಮಗೌಡ್ರ, ಕೃಷ್ಣಪ್ಪ ಸುಣಗಾರ, ಸಾವಿತ್ರವ್ವ ತಳವಾರ, ತಹಶೀಲ್ದಾರ್ ಎಂ.ಬಿ ಪಾಟೀಲ ಉಪಸ್ಥಿತರಿದ್ದರು. ತಾ.ಪಂ.ಸಿಇಒ ಎಸ್.ಆರ್. ಪಾಟೀಲ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.