ADVERTISEMENT

ಪರಿಸರಸ್ನೇಹಿ ಆಚರಣೆಗೆ ಸಲಹೆ

ಹಬ್ಬಗಳ ಸಾಲು; ನಿಯಮ ಪಾಲಿಸಿರಿ, ನಿಷೇಧಿತ ವಸ್ತು ಬಳಸದಿರಿ– ಎಚ್ಚರಿಕೆ

ಹರ್ಷವರ್ಧನ ಪಿ.ಆರ್.
Published 13 ಆಗಸ್ಟ್ 2016, 10:13 IST
Last Updated 13 ಆಗಸ್ಟ್ 2016, 10:13 IST
ಹಾವೇರಿಯ ಬಡಾವಣೆಯೊಂದರಲ್ಲಿ ಗಣಪತಿ ಮೂರ್ತಿ ಸಿದ್ಧಗೊಳ್ಳುತ್ತಿದ್ದ ದೃಶ್ಯ
ಹಾವೇರಿಯ ಬಡಾವಣೆಯೊಂದರಲ್ಲಿ ಗಣಪತಿ ಮೂರ್ತಿ ಸಿದ್ಧಗೊಳ್ಳುತ್ತಿದ್ದ ದೃಶ್ಯ   

ಹಾವೇರಿ: ಆಷಾಢ ಕಳೆದು ಶ್ರಾವಣದ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳು ಬರುತ್ತವೆ. ದುರ್ಮುಖ ಸಂವತ್ಸರ ಮಾತ್ರವಲ್ಲ, ಹಿಜಿರಾ ಶಕೆ ಹಾಗೂ ಕ್ರಿಸ್ತ ಶಕೆಯ ಕ್ಯಾಲೆಂಡರ್‌ ಗಳಲ್ಲೂ ಮುಂಗಾರು ಬಳಿಕ ಬಹುತೇಕ ಹಬ್ಬಗಳ ಸಂಭ್ರಮ. ಅಲ್ಲದೇ, ಜಾತಿ, ಮತ, ಧರ್ಮಗಳ ಭೇದವಿಲ್ಲದ ಸಾಮ ರಸ್ಯದ ‘ರಾಷ್ಟ್ರೀಯ ಹಬ್ಬ’ಗಳೂ ಬರು ತ್ತವೆ. ಈಗ ಎಲ್ಲೆಡೆ ‘ಸ್ವಾತಂತ್ರ್ಯೋತ್ಸವ’ ಮತ್ತು ‘ಗಣೇಶ ಹಬ್ಬ’ದ ಸಡಗರ. ಆದರೆ, ಸಂಭ್ರಮದ ಹಬ್ಬಗಳಲ್ಲಿ ಬಳ ಸುವ ವಸ್ತುಗಳು ಪರಿಸರಕ್ಕೆ ಪೂರಕ ವಾಗದೇ, ಮಾರಕವಾಗುತ್ತಿರುವುದು ಮಾತ್ರ ವಿಪರ್ಯಾಸ.

ಪ್ಲಾಸ್ಟಿಕ್ ನಿಷೇಧ, ಆಚರಣೆಗೆ ಕಾಲ ಮಿತಿ, ಪರಿಸರ ಸ್ನೇಹಿ ವಸ್ತುಗಳ ಬಳಕೆ, ಶಬ್ದದ ಮಿತಿ ಸೇರಿ ವಿವಿಧ ಕಾನೂನು ಗಳಿದ್ದರೂ, ಎಲ್ಲವೂ ಅನುಷ್ಠಾನಗೊಳ್ಳದ ಪರಿಣಾಮ ಹಬ್ಬದ ಸಂಭ್ರಮವು ಪ್ರಕೃತಿಗೆ ಶಾಪವಾಗುತ್ತಿದೆ.

ಪ್ಲಾಸ್ಟಿಕ್‌ ಧ್ವಜ ಮತ್ತಿತರ ವಸ್ತುಗಳ ಬಳಕೆಯ ನಿಷೇಧ ಇದೆ. ಆದರೆ, ಸ್ವಾತಂತ್ರ್ಯ, ಹಬ್ಬಗಳ ಹೆಸರಲ್ಲಿ ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳು ವುದು ಅನಿವಾರ್ಯ.

‘ವಿಸರ್ಜನೆ ಮಾಡುವ ವಿಗ್ರಹಗಳಿಗೆ ಪರಿಸರಕ್ಕೆ ಹಾನಿಯಾಗುವಂಥಹ ಬಣ್ಣ ಗಳನ್ನು ಉಪಯೋಗಿಸಬಾರದು. ಇದ ರಿಂದ ಕೆರೆ, ಬಾವಿ ಇತ್ಯಾದಿ ನೀರು ಕಲು ಷಿತಗೊಂಡು ಪರಿಸರಕ್ಕೆ ಹೆಚ್ಚು ಹಾನಿ ಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ವೆಂಕಟೇಶ ಎಂ.ವಿ. ಎಚ್ಚರಿಕೆ ನೀಡಿದ್ದಾರೆ. 

ಪರಿಸರ ಮಾರಕ ವಸ್ತುಗಳ ಬಳಕೆ ಮನುಷ್ಯರಿಗೆ ಮಾತ್ರವಲ್ಲ ಜಲ, ಪಶು, ಪಕ್ಷಿ, ಪ್ರಾಣಿಗಳು ಮತ್ತಿತರ ಜಲಚರಗಳ ಜೀವಕ್ಕೆ ಅಪಾಯ ಉಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಮಾಡಿದ ಬಣ್ಣದ ವಿಗ್ರಹಗಳ ವಿಸರ್ಜನೆಯನ್ನು ನಿಷೇಧಿಸಿದೆ.ಜನತೆ ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಬಳಸಬೇಕಾಗಿದೆ. ಜೇಡಿ ಮಣ್ಣಿನಿಂದ ಮಾಡಿದ ಅಥವಾ ನೈಸರ್ಗಿಕ ಬಣ್ಣದಿಂದ ತಯಾರಿಸಿದ ಗಣೇಶನನ್ನು ಬಳಸಬಹುದಾಗಿದೆ.

ಕರಗದ ವಸ್ತುಗಳಿಗೆ ನಿಷೇಧ, ವಿಸರ್ಜನೆಗೆ ಮೊದಲು ಹೂ ಮತ್ತಿತರ ಅಲಂಕಾರ ಸಾಮಗ್ರಿಗಳನ್ನು (ಪೇಪರ್‌ ಮತ್ತು ಪ್ಲಾಸ್ಟಿಕ್‌ನಿಂದ ಮಾಡಿದಂತಹ) ತೆಗೆಯಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ, ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತ ಜಿಲ್ಲೆಯ ಬಹುತೇಕ ನಗರ ಹಾಗೂ ಪಟ್ಟಣಗಳಲ್ಲಿ ಪಿಓಪಿ ಗಣಪತಿ ರಚನೆ, ರಾಸಾಯನಿಕ ಬಣ್ಣಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಇನ್ನೂ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. 

ಶಬ್ದ: ಗಣೇಶ ಪೆಂಡಾಲ್‌ ಹಾಗೂ ಮೆರವಣಿಗೆ ವೇಳೆಯಲ್ಲಿ ಡಿಜೆ ಮತ್ತಿತರ ಧ್ವನಿ ವರ್ಧಕಗಳ ಶಬ್ದವನ್ನು ಕಡಿಮೆ ಇಡಬೇಕು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ (2000) ಪ್ರಕಾರ ವಾಣಿಜ್ಯ ಪ್ರದೇಶದಲ್ಲಿ 65, ವಸತಿ ಪ್ರದೇಶದಲ್ಲಿ 55 ಹಾಗೂ ಸೂಕ್ಷ್ಮ ಪ್ರದೇಶ ದಲ್ಲಿ (ಆಸ್ಪತ್ರೆ, ಶಿಕ್ಷಣ ಸಂಸ್ಥೆ ಇತ್ಯಾದಿ) 50 ಡೆಸಿಬೆಲ್‌ಗಿಂತ ಹೆಚ್ಚಿನ ಕಂಪನದ ಶಬ್ದ ಹೊಮ್ಮಿಸುವ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಲಾಗಿದೆ. 

ವಿಶೇಷವಾಗಿ ಆಸ್ಪತ್ರೆ ಮುಂಭಾಗ, ಮಕ್ಕಳು, ವೃದ್ಧರು, ಹೃದ್ರೋಗ ಪೀಡಿ ತರು, ಅಸ್ವಸ್ಥರಿಗೆ ಭಾರಿ ಶಬ್ದವು ಅಪಾಯ ವಾಗಿದ್ದು, ಅವು ಉಂಟು ಮಾಡುವ ಕಂಪನ ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಕ್ರಮಕೈಗೊಳ್ಳ ಬೇಕಾಗಿದೆ. 

‘ಹಬ್ಬಗಳ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎನ್ನು ತ್ತಾರೆ ಹಾವೇರಿ ಓಂ ಟೀಂನ ಗಣೇಶ ರಾಯ್ಕರ್.
ಪ್ಲಾಸ್ಟಿಕ್‌ ಬಳಕೆ ಅವ್ಯಾಹತ !

ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳು ಪರಿಸರ ಹಾಗೂ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತವೆ. ಹೀಗಾಗಿ ಸಂವಿಧಾನದ ಕಲಂ–48ಎ ಅನ್ವಯ, ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ‘ಪರಿಸರ (ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್‌ 5ರ ಅಧಿಕಾರ ಚಲಾಯಿಸಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಹಾಳೆ, ಥರ್ಮೋಕೋಲ್ ಮೈಕ್ರೋ ಬೀಟ್ಸ್‌ ಮತ್ತಿತರ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ 11 ಮಾರ್ಚ್‌ 2016ರಂದು ಸರ್ಕಾರ ನಿರ್ದೇಶನ ಹೊರಡಿಸಿದೆ. ಆದರೆ, ಹಾವೇರಿ ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಪೂರೈಕೆ ನಿರಂತರವಾಗಿದ್ದು, ಅವ್ಯಾಹತ ಬಳಕೆಯಾಗುತ್ತಿದೆ.

ಕಾನೂನು ಕ್ರಮಕ್ಕೆ ಅವಕಾಶ
‘ಪಿಓಪಿ (ಪ್ಲಾಸ್ಟರ್‌ ಆಫ್ ಪ್ಯಾರೀಸ್), ಕೆಲವು ರಾಸಾಯನಿಕ ಬಣ್ಣಗಳ ನಿಷೇಧ, ಗಣೇಶ ವಿಸರ್ಜನೆ ಪ್ರಕ್ರಿಯೆ ಮತ್ತಿತರ ವಿಚಾರಗಳ ಕುರಿತು ಜಿಲ್ಲೆಯ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡದಿದ್ದರೆ, ಸಂಬಂಧಿತ ಅಧಿಕಾರಿ ಗಳು, ನಿಯಮ ಪಾಲಿಸದ ಸಾರ್ವಜನಿ ಕರ ವಿರುದ್ಧ ನೀರಿನ ನಿರ್ವಹಣೆ ಕಾಯಿದೆ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಅಧಿಕಾರ ಇದೆ’ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಾದೇಶಿಕ ಪರಿಸರ ಅಧಿಕಾರಿ ಕೊಟ್ರೇಶ ಕೆ.ಬಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.