ADVERTISEMENT

`ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ'

ಮಣ್ಣೂರಲ್ಲಿ ಪಂಚಾಕ್ಷರಿ ಗವಾಯಿಗಳ ಪುರಾಣ ಪ್ರವಚನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 6:30 IST
Last Updated 8 ಜನವರಿ 2013, 6:30 IST
ಹಾವೇರಿ ತಾಲ್ಲೂಕಿನ ಮಣ್ಣೂರಿನಲ್ಲಿ ನಡೆದ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರರ ನವೀಕರಣಗೊಂಡ ಗದ್ದುಗೆ ಉದ್ಘಾಟನಾ ಸಮಾರಂಭದಲ್ಲಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನಗೆಳೂರಿನ ಗದಿಗೆಯ್ಯ ಶಾಸ್ತ್ರಿ ಮತ್ತಿತರರು ಚಿತ್ರದಲ್ಲಿದ್ದಾರೆ.
ಹಾವೇರಿ ತಾಲ್ಲೂಕಿನ ಮಣ್ಣೂರಿನಲ್ಲಿ ನಡೆದ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರರ ನವೀಕರಣಗೊಂಡ ಗದ್ದುಗೆ ಉದ್ಘಾಟನಾ ಸಮಾರಂಭದಲ್ಲಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನಗೆಳೂರಿನ ಗದಿಗೆಯ್ಯ ಶಾಸ್ತ್ರಿ ಮತ್ತಿತರರು ಚಿತ್ರದಲ್ಲಿದ್ದಾರೆ.   

ಹಾವೇರಿ: `ಪೋಷಕರು ಮಕ್ಕಳಲ್ಲಿ ಉತ್ತಮ ಆದರ್ಶಗಳನ್ನು ಬಿತ್ತಿ ಬೆಳೆದಾಗ ಮಾತ್ರ ಅವರಿಂದ ಉತ್ತಮ ಫಸಲು ನಿರೀಕ್ಷಿಸಲು ಸಾಧ್ಯ' ಎಂದು ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಭಾನುವಾರ ನಡೆದ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರ ಶ್ರೀಗಳ ನವೀಕರಣಗೊಂಡ ಗದ್ದುಗೆ ಉದ್ಘಾಟನೆ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳ ಪುರಾಣ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಆಚಾರ-ವಿಚಾರ, ನಾಡಿನ ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಬೇಕು. ಇದರಿಂದ ಮಕ್ಕಳು ಉತ್ತಮ ಸಂಸ್ಕಾರ ಹೊಂದುವುದರೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಲ್ಲ ಪ್ರಜೆಯಾಗಬಲ್ಲರು ಎಂದರು.

ಪಂ.ಪಂಚಾಕ್ಷರಿ ಗವಾಯಿಗಳು ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಕಲೆ, ಸಾಹಿತ್ಯ, ಸಂಗೀತ ಲೋಕಗಳನ್ನು ಶ್ರಿಮಂತಗೊಳಿಸುವುದರ ಜತೆಗೆ ಅಂಧರ ಬಾಳಿಗೆ ಬೆಳಕನ್ನು ನೀಡಿದ ಮಹಾನ್ ಸಾಧಕರಾದರೆ, ಮಣ್ಣೂರಿನ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರ ಶ್ರೀಗಳು ಗುರು-ಶಿಷ್ಯರ ಅನ್ಯೋನ್ಯ ಸಂಬಂಧದ ಪ್ರತೀಕರಾಗಿದ್ದಾರೆ ಎಂದರು.

ಮಾಜಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಮರೆಯಬಾರದು. ಮಕ್ಕಳಲ್ಲಿ ನಾಡು, ನುಡಿ, ಸಂಸ್ಕೃತಿ ಹಾಗೂ ಕಲೆ, ಪರಂಪರೆ ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆನೀಡಬೇಕು ಎಂದರು.

ನೆಗಳೂರಿನ ಗದಿಗೆಯ್ಯ ಶಾಸ್ತ್ರಿಗಳು ಪ್ರವಚನ, ಕೊಟ್ರಯ್ಯ ಗವಾಯಿಗಳು ಕಲ್ಲೂರ ಸಂಗೀತ ಸೇವೆ ಹಾಗೂ ಕಲ್ಲೂರಿನ ಖಾನಸಾಹೇಬ್ ತಬಲಾ ವಾದನ ನಡೆಸಿಕೊಟ್ಟರು. ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಂದಾಯ ಇಲಾಖೆ ಉಪತಹಶೀಲ್ದಾರ್ ವೀರಯ್ಯ ಹಿರೇಮಠ, ಸಮಾಜ ಸೇವಕ ಹಾಲಯ್ಯ ಕುಲಕರ್ಣಿ, ಕಂದಾಯ ನಿರೀಕ್ಷಕ ಪಂಚಯ್ಯ ಹಿರೇಮಠ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕರಿಯಪ್ಪ ಹುಚ್ಚಣ್ಣನವರ, ಶಂಕ್ರಪ್ಪ ಹಟ್ಟಿಯವರ, ಎಂಜಿನಿಯರ್ ದಿಲೀಪ್, ಮುಖ್ಯ ಶಿಕ್ಷಕ  ಚಂದ್ರಶೇಖರ ಮರಳಿಹಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಮಣ್ಣೂರು ಗ್ರಾಮದ ಮುಖಂಡರಾದ ಜ್ಯೋತೆಪ್ಪ ಹೊಸಮನಿ, ಗದಿಗೆಪ್ಪ ಹನ್ನೀರ, ವಿರೂಪಾಕ್ಷಪ್ಪ ತೋರಗಲ್ಲ. ವೀರಪ್ಪ ಹೊಸಮನಿ, ಶೇಖಪ್ಪ ಮಡ್ಲೂರ, ಮಹಾಲಿಂಗಪ್ಪ ಹೊಸಮನಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಗುರುಶಾಂತಯ್ಯ ಹಿರೇಮಠ ಸ್ವಾಗತಿಸಿದರು. ಶಿವಾನಂದ ಮಡ್ಲೂರ ನಿರೂಪಿಸಿದರು. ರಮೇಶ ಮಡ್ಲೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.