ADVERTISEMENT

‘ಮಳೆ ಬಿದ್ರೆ ಚರಂಡಿ ಶುಚಿತ್ವವೇ ಕೆಲಸ’

ಗೂಗಿಕಟ್ಟೆಯ ವಾಣಿಜ್ಯ ಮಳಿಗೆಗಳಿಗೆ ಕೊಳಚೆ ಕಾಟ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:29 IST
Last Updated 26 ಮೇ 2018, 13:29 IST

ಹಾವೇರಿ: ಹಲವು ದಶಕಗಳಿಂದ ಇದೇ ಗೋಳು... ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಮತ್ತೆ–ಮತ್ತೆ ಅದೇ ಭರವಸೆ. ಮಳೆ ಸುರಿದರೆ ಅಂಗಡಿಗಳ ಒಳಗೆ ಚರಂಡಿ ನೀರು, ಅಂದು ನಯಾಪೈಸೆ ವ್ಯಾಪಾರವೂ ಇಲ್ಲ, ಮಳೆ ನಿಂತ ಬಳಿಕ ಸ್ವಚ್ಛಗೊಳಿಸುವ ಕಾಯಕ...

ಇದು ನಗರದ ಎಂ.ಜಿ.ರಸ್ತೆಯ ಗೂಗಿಕಟ್ಟೆಯಲ್ಲಿರುವ ನಗರಸಭೆಯ ‘ವಿ’ (ಇಂಗ್ಲಿಷ್ ಅಕ್ಷರ) ಆಕೃತಿಯ ವಾಣಿಜ್ಯ ಮಳಿಗೆಗಳಲ್ಲಿನ ಬಾಡಿಗೆದಾರರ ಗೋಳು.

‘ನಗರದ ಗೂಗಿಕಟ್ಟೆ, ಮುನ್ಸಿಪಲ್‌ ರಸ್ತೆ, ಕೊರಗರ ಓಣಿ, ದೇಸಾಯಿ ಗಲ್ಲಿ, ಪೊಲೀಸ್‌ ವಸತಿ ಗೃಹಗಳ ಹಿಂಭಾಗ, ರಾಘವೇಂದ್ರ ದೇವಸ್ಥಾನ, ಎಂ.ಜಿ.ರಸ್ತೆ ಸೇರಿದಂತೆ ಸುತ್ತಲಿನ ಪ್ರದೇಶದ ಚರಂಡಿ ನೀರು ಈ ಮಳಿಗೆಗಳ ಪಕ್ಕದ ಕಾಲುವೆ ಮೂಲಕ ಹರಿದು ಹೋಗುತ್ತದೆ. ಆದರೆ, ಸಣ್ಣ ಮಳೆ ಬಂದರೂ ಕಾಲುವೆ ತುಂಬಿ ಮಳಿಗೆಗಳು ಕೊಳಚೆ ನೀರಿನಿಂದ ಆವೃತಗೊಳ್ಳುತ್ತವೆ’ ಎಂದು ವಾಚ್‌ ಅಂಗಡಿ ಮಾಲೀಕ ಅಶೋಕ ರಜಪೂತ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಮಳಿಗೆಗಳನ್ನು ಕಟ್ಟಿದ ಪ್ರಾರಂಭದಲ್ಲಿ ಎಂ.ಜಿ.ರಸ್ತೆಯು ಕೆಳಗಿತ್ತು. ವಾಣಿಜ್ಯ ಮಳಿಗೆಗಳು ಎತ್ತರದಲ್ಲಿ ಇದ್ದವು. ಆಗ ನಾವೇ ಮಳಿಗೆಯ ಮೆಟ್ಟಿಲಿನ ಮುಂಭಾಗವನ್ನು ಮಣ್ಣಿನಿಂದ ಮುಚ್ಚಿದ್ದೇವೆ. ಆದರೆ, ಎಂ.ಜಿ.ರಸ್ತೆ ಅಭಿವೃದ್ಧಿ ಪಡಿಸಿದ ಬಳಿಕ ಎತ್ತರವಾಗಿದ್ದು, ಮಳಿಗೆಗಳು ತಗ್ಗಿನಲ್ಲಿವೆ. ಹೀಗಾಗಿ, ಎಂ.ಜಿ.ರಸ್ತೆ ಮತ್ತು ಗೂಗಿಕಟ್ಟೆಯಲ್ಲಿನ ಮಳೆ ನೀರು ಹಾಗೂ ಹಿಂಭಾಗದ ಕಾಲುವೆಗಳ ಕೊಳಚೆ ನೀರು ಮಳಿಗೆಗಳಿಗೆ ನುಗ್ಗುತ್ತಿವೆ’ ಎಂದು ಅವರು ತಿಳಿಸಿದರು.

‘ಮಳೆಗಾಲದ ನಾಲ್ಕೈದು ತಿಂಗಳು ನಯಾಪೈಸೆ ವ್ಯಾಪಾರವಿಲ್ಲದೇ, ಅಂಗಡಿ ಮುಂದಿನ ಚರಂಡಿ ನೀರನ್ನು ಸ್ವಚ್ಛಗೊಳಿಸುವುದರಲ್ಲಿಯೇ ಕಾಲ ಕಳೆಯಬೇಕು. ಧಾರಾಕಾರ ಮಳೆಯಾದರೆ ಕೊಳಚೆ ನೀರು ಅಂಗಡಿಗಳಿಗೂ ನುಗ್ಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಂಗಡಿ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

ಒಟ್ಟು 40 ವಾಣಿಜ್ಯ ಮಳಿಗೆಗಳ ಪೈಕಿ ಕೆಳಗಿನ 20 ಮಳಿಗೆಗಳಲ್ಲಿ ಬುಕ್‌ ಸ್ಟಾಲ್‌, ಝೆರಾಕ್ಸ್‌ ಸೆಂಟರ್‌, ಕ್ಷೌರದಂಗಡಿ, ವಾಚ್‌ ರಿಪೇರಿ, ಟಿ.ವಿ ರಿಪೇರಿ, ಬ್ಯಾಗ್‌ ಅಂಗಡಿಗಳಿವೆ. ಧಾರಾಕಾರ ಮಳೆಯಾದಾಗ ಅಂಗಡಿಯಲ್ಲಿನ ಪುಸ್ತಕಗಳು, ಎಲೆಕ್ಟ್ರಾನಿಕ್‌ ವಸ್ತು ಮತ್ತಿತರ ಸರಕುಗಳಿಗೆ ಹಾನಿಯಾಗಿವೆ ಎಂದು ಇಲ್ಲಿನ ವ್ಯಾಪಾರಸ್ಥರು ತಿಳಿಸುತ್ತಾರೆ.

ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

**
ನಗರದ ಎಂ.ಜಿ.ರಸ್ತೆಯ ಗೂಗಿಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಚರಂಡಿ ನೀರು ನುಗ್ಗುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಗಂಗಾಧರಯ್ಯ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌

–ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.