ADVERTISEMENT

ರಟ್ಟೀಹಳ್ಳಿ ತಾಲ್ಲೂಕಿಗೆ ಸಕಲ ಸಿದ್ಧತೆ

ವಿನಾಯಕ ಭೀಮಪ್ಪನವರ
Published 12 ಡಿಸೆಂಬರ್ 2017, 10:23 IST
Last Updated 12 ಡಿಸೆಂಬರ್ 2017, 10:23 IST
ರಟ್ಟೀಹಳ್ಳಿ ನೂತನ ತಾಲ್ಲೂಕು ಕಚೇರಿಗೆ ಜಿಲ್ಲಾಡಳಿತ ಗುರುತಿಸಿದ ಗ್ರಾಮದ ತುಂಗಾ ಮೇಲ್ದಂಡೆ ಕಚೇರಿಯ ಹಳೇಯ ಮುಖ್ಯ ಕಟ್ಟಡ
ರಟ್ಟೀಹಳ್ಳಿ ನೂತನ ತಾಲ್ಲೂಕು ಕಚೇರಿಗೆ ಜಿಲ್ಲಾಡಳಿತ ಗುರುತಿಸಿದ ಗ್ರಾಮದ ತುಂಗಾ ಮೇಲ್ದಂಡೆ ಕಚೇರಿಯ ಹಳೇಯ ಮುಖ್ಯ ಕಟ್ಟಡ   

ರಟ್ಟೀಹಳ್ಳಿ: ರಾಜ್ಯ ಸರ್ಕಾರ ಘೋಷಿಸಿರುವ 50 ಹೊಸ ತಾಲ್ಲೂಕುಗಳಲ್ಲಿ ರಟ್ಟೀಹಳ್ಳಿಯೂ ಒಂದು. ಎಲ್ಲ ತಾಲ್ಲೂಕುಗಳು 2018ರ ಜನವರಿ 1ರಿಂದ ಕಾರ್ಯರೂಪಕ್ಕೆ ಬರಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಅವರ ಹೇಳಿಕೆ ರಟ್ಟೀಹಳ್ಳಿ ಭಾಗದ ಜನರಲ್ಲಿ ಉತ್ಸಾಹ ಮೂಡಿಸಿದೆ.

ನೂತನ ತಾಲ್ಲೂಕು ರಚನೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿದ್ದು, ಇಲ್ಲಿನ ತುಂಗಾ ಮೇಲ್ದಂಡೆ ಕಚೇರಿಯ ಹಳೇಯ ಮುಖ್ಯ ಕಟ್ಟಡ 36 ಕೊಠಡಿಗಳನ್ನು ಗುರುತಿಸಲಾಗಿದೆ. ಆದರೆ, ಅವುಗಳನ್ನು ದುರಸ್ತಿ ಮಾಡಿ ಸುಣ್ಣ–ಬಣ್ಣ ಬಳಿಯುವುದು ಬಾಕಿಯಿದೆ.

ರಟ್ಟೀಹಳ್ಳಿ ನೂತನ ತಾಲ್ಲೂಕಿಗೆ ರಾಣೆಬೆನ್ನೂರು ಹಾಗೂ ಶಿಕಾರಿಪುರ ತಾಲ್ಲೂಕಿನ ಕೆಲ ಗ್ರಾಮಗಳನ್ನು ಸೇರ್ಪಡೆ ಮಾಡುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಅವು ಒಲವು ತೋರದೇ ಇರುವ ಕಾರಣಕ್ಕೆ ಹಿರೇಕೆರೂರ ತಾಲ್ಲೂಕಿನ ಒಟ್ಟು 63 ಗ್ರಾಮಗಳನ್ನು ಮಾತ್ರ ಗುರುತಿಸಿ ನೂತನ ತಾಲ್ಲೂಕು ರಚಿಸಲಾಗಿದೆ.

ADVERTISEMENT

ರೂಪರೇಷೆ: ರಟ್ಟೀಹಳ್ಳಿ ನೂತನ ತಾಲ್ಲೂಕು ನೀಲನಕ್ಷೆ ಪ್ರಕಾರ ಒಟ್ಟು 1,02,163,03 ಎಕರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 7,959,32 ಎಕರೆ ಸಾಗುವಳಿ ಭೂಮಿ ಇದೆ. ಈ ಪೈಕಿ ಒಟ್ಟು 11,185 ಎಕರೆ ನೀರಾವರಿ, 13,513 ಎಕರೆ ಅರಣ್ಯ ಭೂಮಿ, 231 ಎಕರೆ ಹುಲ್ಲುಗಾವಲು, 4,678 ಎಕರೆ ಸಾಗುವಳಿಗೆ ಯೋಗ್ಯವಲ್ಲದ ಭೂಮಿ ಎಂದು ಗುರುತಿಸಲಾಗಿದೆ. 2011ರ ಜನಗಣತಿ ಪ್ರಕಾರ 1.10 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ನೂತನ ತಾಲ್ಲೂಕು ಒಳಗೊಂಡಿರಲಿದೆ.

ಪ್ರಮುಖ ಸ್ಥಳಗಳು: ರಟ್ಟೀಹಳ್ಳಿಯ ಕದಂಬೇಶ್ವರ ದೇವಸ್ಥಾನ, ಕಬ್ಬಿಣಕಂತಿಮಠ, ಕಣವಿಸಿದ್ಗೇರಿಯ ಶಿದ್ದೇಶ್ವರ ದೇವಸ್ಥಾನ, ಮಾಸೂರಿನ ಸರ್ವಜ್ಞನ ಸಮಾಧಿ ಸ್ಥಳ, ಕೆಂಚಮ್ಮಳ ಕೆರೆ, ತಿಪ್ಪಾಯಿಕೊಪ್ಪದ ಮೂಕಪ್ಪಸ್ವಾಮಿ ಮಠ, ಸತ್ತಗೀಹಳ್ಳಿಯ ಸರ್ವದೇವರ ಆಲಯ. ಬುಳ್ಳಾಪುರ ದುರ್ಗಾದೇವಿ ದೇವಸ್ಥಾನ, ಗುಡ್ಡದಮಾದಾಪುರದ ಕರಡಿಕೊಳ್ಳ ಶಿದ್ದೇಶ್ವರ ದೇವಸ್ಥಾನ, ಗುಂಡಗಟ್ಟಿಯ ಶನೇಶ್ವರ ದೇವಾಲಯ ಹಾಗೂ ಭಗವತಿ ಕೆರೆ ಇವುಗಳು ನೂತನ ತಾಲ್ಲೂಕಿನಲ್ಲಿರುವ ಪ್ರಮುಖ ಸ್ಥಳ ಎನಿಸಲಿವೆ.

ರಟ್ಟೀಹಳ್ಳಿ ನೂತನ ತಾಲ್ಲೂಕಿನ ರೂಪುರೇಷೆಗಳನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಸರ್ಕಾರದಿಂದ ಸೂಚನೆ ಬಂದ ತಕ್ಷಣವೇ ಈಗಾಗಲೇ ಗುತಿಸಲಾದ ತುಂಗಾ ಮೇಲ್ದಂಡೆ ಕಚೇರಿಯ ಹಳೇ ಮುಖ್ಯ ಕಟ್ಟಡವನ್ನು ದುರಸ್ತಿ ಮಾಡಲಾಗುವುದು ಎಂದು ಹಿರೇಕೆರೂರ ತಾಲ್ಲೂಕು ತಹಶೀಲ್ದಾರ್‌ ಎ.ವಿ.ಶಿಗ್ಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

63 ಗ್ರಾಮಗಳು...

ನೂತನ ತಾಲ್ಲೂಕಿನಲ್ಲಿ ರಟ್ಟೀಹಳ್ಳಿ, ತೋಟಗಂಟಿ, ಕಡೂರ, ಬುಳ್ಳಾಪುರ, ಹಾಡೇ, ಸಣ್ಣಗುಬ್ಬಿ, ಹಿರೇಮಾದಾಪುರ, ಕುಡಪಲಿ, ಯಡಗೋಡ, ದೊಡ್ಡಗುಬ್ಬಿ, ಬಡಾಸಂಗಾಪುರ, ನೆಸ್ವಿ, ಮಾವಿನತೋಪ, ಮಕರಿ, ಕುಂಚೂರ, ತಿಮಲಾಪುರ, ಕೋಡಿಹಳ್ಳಿ, ಲಿಂಗದೇವರಕೊಪ್ಪ, ಚಿಕ್ಕಯಡಚಿ, ಹಿರೇಯಡಚಿ, ಕ್ಯಾತನಕೇರಿ, ಹುಲ್ಲತ್ತಿ, ಶಿರಗಂಬಿ, ಸತ್ತಿಗೀಹಳ್ಳಿ, ಹಿರೇಮೊರಬ, ಚಿಕ್ಕಮೊರಬ, ಯಲಿವಾಳ, ಚಪ್ಪರದಹಳ್ಳಿ, ರಾಮತೀರ್ಥ, ಖಂಡೀಬಾಗೂರ, ಮಾಸೂರ, ತಿಪ್ಪಾಯಿಕೊಪ್ಪ, ಕೋಡಮಗ್ಗಿ, ಯತ್ತಿನಹಳ್ಳಿ, ಗಂಗಾಯಿಕೊಪ್ಪ, ಮೇದೂರ, ಹೊಸಕಟ್ಟಿ, ಅಂಗರಗಟ್ಟಿ, ಹಳಿಯಾಳ, ತಡಕನಹಳ್ಳಿ, ಚಿಕ್ಕಕಬ್ಬಾರ, ಹಿರೇಕಬ್ಬಾರ, ಗಲಗಿನಕಟ್ಟಿ, ಹಳ್ಳೂರ, ಅಣಜಿ, ನಾಗವಂದ, ಗುಡ್ಡದಮಾದಾಪುರ, ಕಮಲಾಪುರ, ಪುರದಕೇರಿ, ಚಟ್ಟನಹಳ್ಳಿ, ಕೆಂಚಾಯಿಕೊಪ್ಪ, ಬತ್ತಿಕೊಪ್ಪ, ಮಳಗಿ, ಇಂಗಳಗೊಂದಿ, ಗುಂಡಗಟ್ಟಿ, ಹಿರೇಮತ್ತೂರ, ಮೈದೂರ, ಶಂಕರನಹಳ್ಳಿ, ಕಣವಿಸಿದ್ಗೇರಿ, ಪರ್ವಸಿದ್ಗೇರಿ, ಜೋಕನಹಾಳ, ಗುಂಡಗಟ್ಟಿ ಹಾಗೂ ಹೊಸಳ್ಳಿ ಸೇರ್ಪಡೆಯಾಗಿವೆ.

* * 

ರಟ್ಟಿಹಳ್ಳಿ ನೂತನ ತಾಲ್ಲೂಕು ಆಡಳಿತಕ್ಕೆ ಗ್ರಾಮದ ಹಳೇಯ ತುಂಗಾ ಮೇಲ್ದಂಡೆ ಕಚೇರಿಯ ಮುಖ್ಯ ಕಟ್ಟಡವನ್ನು ಜಿಲ್ಲಾಡಳಿತ ಗುರುತಿಸಿದೆ. ಸರ್ಕಾರದಿಂದ ಅನುಮತಿ ಬಂದ ತಕ್ಷಣ ದುರಸ್ತಿ ಮಾಡಿಸಲಾಗುವುದು
ಎ.ವಿ.ಶಿಗ್ಗಾವಿ
ತಹಶೀಲ್ದಾರ್‌, ಹಿರೇಕೆರೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.