ADVERTISEMENT

ರಾಣೆಬೆನ್ನೂರು: ಮರುಳು ಮಾಡುವುದೇ ಮರಳು?

ಸದ್ದು ಮಾಡುತ್ತಿರುವ ನೀರು, ನೀರಾವರಿ, ರೈತರ ಸಮಸ್ಯೆಗಳು: ಲಿಂಗಾಯತ– ಹಿಂದುಳಿದ ವರ್ಗಗಳ ರಾಜಕಾರಣ

ಹರ್ಷವರ್ಧನ ಪಿ.ಆರ್.
Published 6 ಮೇ 2018, 11:10 IST
Last Updated 6 ಮೇ 2018, 11:10 IST
ರಾಣೆಬೆನ್ನೂರು: ಮರುಳು ಮಾಡುವುದೇ ಮರಳು?
ರಾಣೆಬೆನ್ನೂರು: ಮರುಳು ಮಾಡುವುದೇ ಮರಳು?   

ಹಾವೇರಿ: ವಿಧಾನ ಸಭಾಧ್ಯಕ್ಷ, ಹತ್ತನೇ ಬಾರಿ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಸ್ಪರ್ಧೆಯಿಂದ ಗಮನ ಸೆಳೆದಿರುವ ಕ್ಷೇತ್ರ ರಾಣೆಬೆನ್ನೂರು. ಇಲ್ಲಿನ ಚುನಾವಣೆ ಕಾವೇರಿದ್ದು, ತ್ರಿಕೋನ ಸ್ಪರ್ಧೆಯ ಸಾಧ್ಯತೆಯನ್ನು ಜನತೆ ಮುಂದಿಡುತ್ತಾರೆ.

ಕೆ.ಬಿ. ಕೋಳಿವಾಡ, ಕೆಪಿಜೆಪಿಯ ಆರ್. ಶಂಕರ್ ಹಾಗೂ ಬಿಜೆಪಿಯ ಬಸವರಾಜ ಕೇಲಗಾರ ಜೊತೆ ಜೆಡಿಎಸ್ ಶ್ರೀಪಾದ ಸಾವಕಾರ್ ಹಾಗೂ ಪಕ್ಷೇತರ ರುಕ್ಮಿಣಿ ಸಾವಕಾರ್ ರಂಗು ಹೆಚ್ಚಿಸಿದ್ದಾರೆ.

ತುಂಗಭದ್ರಾ ನದಿ ದಡದ ಈ ಕ್ಷೇತ್ರದಲ್ಲಿ ‘ನೀರು’ ಮತ್ತು ‘ಮರಳು’ ಸದ್ದು ಮಾಡುತ್ತಿವೆ. ನದಿ ತೀರದ ರೈತರು ಮರಳು ಗಣಿಗಾರಿಕೆ ಹಾಗೂ ಹೊಲಕ್ಕೆ ನೀರಿನ ವಿಷಯ ಪ್ರಸ್ತಾಪಿಸಿದರೆ, ಇತರ ಭಾಗದ ರೈತರು ಮತ್ತು ಜನತೆ ಕುಡಿಯುವ ನೀರು, ನೀರಾವರಿ ಜೊತೆಗೆ ಸೂರು ಮತ್ತಿತರ ಕಾಮಗಾರಿಗಳಿಗೆ ಮರಳು ಲಭ್ಯತೆಯ ಬಗ್ಗೆ ಉಲ್ಲೇಖಿಸುತ್ತಾರೆ.

ADVERTISEMENT

‘ಯುಜನತೆ ಊಳಿಗಮಾನ್ಯ ಶೈಲಿಯ ರಾಜಕಾರಣ ಇಷ್ಟಪಡುವುದಿಲ್ಲ. ಎಷ್ಟೇ ಕೋಟಿ ಮತ್ತು ಕೋಟೆ ಕಟ್ಟಿದರೂ ಮಣೆ ಹಾಕುವುದಿಲ್ಲ. ನಾಯಕರು  ಜನರ ನಡುವೆ ಇರಬೇಕು ಎಂದು ಬಯಸುತ್ತಾರೆ’ ಎಂದು ರಾಣೆಬೆನ್ನೂರು ಬಸ್ ನಿಲ್ದಾಣ ಬಳಿ ನಿಂತಿದ್ದ ಯವಕನೊಬ್ಬ ಮಾರ್ಮಿಕವಾಗಿ ನುಡಿದನು.

ಅರೇಮಲ್ಲಾಪುರದ ಕೃಷ್ಣಮೂರ್ತಿ ಪ್ರಕಾರ, ‘ಕಳೆದೈದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿವೆ. ಸಿದ್ದರಾಮಯ್ಯ ಸರ್ಕಾರದ ಭಾಗ್ಯಗಳು, ಹಲವಾರು ವೈಯಕ್ತಿಕ ನೆರವಿನ ಯೋಜನೆಗಳು ಬಡವರನ್ನು ತಲುಪಿವೆ. ಯುಟಿಪಿ ಮತ್ತಿತರ ನೀರಾವರಿ ಯೋಜನೆಗಳು ಪ್ರಗತಿ ಕಂಡಿವೆ. ಆದರೆ, ‘ನೀರು’ ತಲುಪಬೇಕಾಗಿದೆ’ ಎಂದರು.

‘ಅಭಿವೃದ್ಧಿ, ಹೊಸಬರಿಗೆ ಅವಕಾಶ ಹಾಗೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಸದೃಢ ಸರ್ಕಾರದ ಚಿಂತನೆ ಕುರಿತ ಚರ್ಚೆಗಳು ಜೋರಾಗಿವೆ. ಕೊನೆಯ ಮೂರು ದಿನಗಳಲ್ಲಿ ಜನರ ಆಯ್ಕೆ ಸ್ಪಷ್ಟಗೊಳ್ಳಬಹುದು’ ಎಂದ ವಿ.ವೈ. ಕುಸಗೂರ, ‘ನೇರ ಸ್ಪರ್ಧೆಯು ಈಗ ತ್ರಿಕೋನಕ್ಕೆ ತಿರುಗುತ್ತಿದೆ’ ಎಂದರು.

ಅಧ್ಯಾತ್ಮಿಕ ಶೈಲಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕುಸಗೂರಿನ ವಿವೇಕ ಹಳ್ಳೇರ, ‘ಮತ ಕೇಳುವಾಗ ಎಲ್ಲರೂ ಒಳ್ಳೆಯವರೇ ಇರುತ್ತಾರೆ. ಅಧಿಕಾರ ಬಂದ ತಕ್ಷಣವೇ ಬದಲಾಗುತ್ತಾರೆ. ಇದನ್ನು ಮೀರಿದ ವ್ಯಕ್ತಿತ್ವದ ಹುಡುಕಾಟವು ಜನರ ಮನಸ್ಸಿನಲ್ಲಿ ನಡೆಯುತ್ತಿರುವಂತಿದೆ’ ಎಂದರು.

ಫೈಟ್:
ಕೋಳಿವಾಡ ಸಂಬಂಧಿಕರಾದ ಶ್ರೀಪಾದ ಹಾಗೂ ರುಕ್ಮಿಣಿ ಕಣದಲ್ಲಿ ಇದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧೆ ನೀಡಿದ್ದ ಆರ್. ಶಂಕರ್ ಕೆಪಿಜೆಪಿಯ ‘ಆಟೊ’ ಹಿಡಿದು ಸುತ್ತಾಡುತ್ತಿದ್ದಾರೆ. ಕೋಳಿವಾಡರಿಗೆ ಸ್ಪರ್ಧೆ ಹೆಚ್ಚಿದೆ. ಅತ್ತ ಬಿಜೆಪಿಯ ಡಾ.ಬಸವರಾಜ ಕೇಲಗಾರ ಪರ ಪ್ರಚಾರವು ದಿನೇ ದಿನೇ ಕಾವು ಪಡೆಯುತ್ತಿದೆ. ಮಾಜಿ ಶಾಸಕ, ದಿವಂಗತ ಜಿ. ಶಿವಣ್ಣ ಅಭಿಮಾನಿಗಳ ನಿಲುವೂ ನಿರ್ಣಾಯಕವಾಗಿದೆ. ಈ ನಡುವೆಯೇ ಲಿಂಗಾಯತ ಒಳ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಮತ ಸೆಳೆಯುವ ಕಸರತ್ತೂ ತೀವ್ರಗೊಂಡಿದೆ. 1972ರಿಂದ ಇಂತಹ ಹಲವು ಪಟ್ಟುಗಳನ್ನು ಕಂಡಿರುವ ಕೋಳಿವಾಡರ ಈ ಬಾರಿಯ ನಡೆಯೂ ಕೌತುಕ ಹೆಚ್ಚಿಸಿದೆ.
ಅಂತೂ ಇಂತೂ ತುಂಗಭದ್ರಾ ಬತ್ತಿದರೂ, ಕ್ಷೇತ್ರದಲ್ಲಿ ತರಹೇವಾರಿ ಹೊಳೆ ಹರಿಯುವ ನಿರೀಕ್ಷೆ ಹೆಚ್ಚಿದೆ. ಚುನಾವಣಾ ಆಯೋಗವೂ ಕಣ್ಣಿಟ್ಟಿದೆ.

*****

ಮತದಾರರ ವಿವರಗಳು (ಈ ಪೈಕಿ ಮಹಿಳಾ ಮತದಾರರು)

2013 ರಲ್ಲಿ ಮತದಾರರು– 1,86,938 (88,871)
2018ರಲ್ಲಿ ಮತದಾರರು–2,23,068 (1,08,738)

*****

‘ಅಪವಿತ್ರ ಮೈತ್ರಿ’ಗಳ ಆರೋಪ

ಕ್ಷೇತ್ರದಲ್ಲಿ ‘ಅಪವಿತ್ರ ಮೈತ್ರಿ’ ಕುರಿತ ಆರೋಪ –ಪ್ರತ್ಯಾರೋಪಗಳು ಹೆಚ್ಚಿವೆ. ಕಾಂಗ್ರೆಸ್– ಬಿಜೆಪಿ ಮೈತ್ರಿ ಕುರಿತು ಆರೋಪಿಸಿ ಪ್ರತಿಭಟನೆಗಳು ನಡೆದಿದ್ದರೆ, ಕೆಪಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರೇ ನೆರಳಾಗಿದ್ದಾರೆ ಎಂಬ ದೂರುಗಳು ಇವೆ.

ಜೆಡಿಎಸ್ ಸ್ಪರ್ಧೆಯ ಹಿಂದೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಕೈವಾಡ ಇದೆ ಎಂದು ಕೋಳಿವಾಡ ಬೆಂಬಲಿಗರು ದೂರಿದ್ದರು. ಪಕ್ಷೇತರ ಅಭ್ಯರ್ಥಿಯೊಬ್ಬರ ಸ್ಪರ್ಧೆಗೆ ಕೆಲ ಕಾಂಗ್ರೆಸಿಗರ ಕುಮ್ಮಕ್ಕು ಇದೆ ಎಂಬ ವಿಶ್ಲೇಷಣೆಗಳೂ ಇವೆ. ತನ್ನನ್ನು ಸೋಲಿಸಲು ಕಾಂಗ್ರೆಸ್–ಬಿಜೆಪಿ ಕೈ ಜೋಡಿಸಿದರೂ, ಜನತೆ ಮಣೆ ಹಾಕಲ್ಲ ಎಂದು ಕೆಪಿಜೆಪಿ ಅಭ್ಯರ್ಥಿ ಆರ್. ಶಂಕರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.