ಅರಳೇಶ್ವರ (ಅಕ್ಕಿಆಲೂರ): ಗ್ರಾಮದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಜಾನಪದ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಗಳ ನಾಗಾಲೋಟದ ಪ್ರದರ್ಶನ ಜಮಾಯಿಸಿದ ಸಹಸ್ರಾರು ಪ್ರೇಕ್ಷಕರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.
ಕೊರಳಿಗೆ ಒಣ ಕೊಬ್ಬರಿ, ಕಾಲಿಗೆ ಗೆಜ್ಜೆ, ಬೆಳ್ಳಿ ಕೊಂಬಣಸು, ಜೂಲ, ರಿಬ್ಬನ್ನು ಧರಿಸಿದ್ದ ಹೋರಿಗಳು ವಿಶೇಷವಾಗಿ ಅಲಂಕಾರಗೊಂಡಿದ್ದವು. ಸ್ಪರ್ಧಾ ಅಖಾಡಿಕ್ಕೆ ಹೋರಿಗಳನ್ನು ರೈತ ಸಮೂಹ ಕರೆತರುತ್ತಿದ್ದಂತೆಯೇ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು. ಸಹಸ್ರಾರು ಪ್ರೇಕ್ಷಕರ ಸಿಳ್ಳೆ, ಕೇಕೆ, ಹಲಗೆ ನಾದ, ಪಟಾಕಿ ಅಬ್ಬರದ ಮಧ್ಯೆಯೇ ಜೋರಾಗಿ ಓಡಿದ ಹೋರಿಗಳು ಕಣ್ಮನ ತಣಿಸಿದವು. ತಮ್ಮ ನೆಚ್ಚಿನ ಸಿನಿತಾರೆ, ಚಿತ್ರದ ಹೆಸರನ್ನು ಹೋರಿಗಳ ಬೆನ್ನ ಮೇಲೆ ಬರೆದಿದ್ದ ರೈತರು ಸಂಭ್ರಮಿಸಿದರು.
ತಮ್ಮ ಹೋರಿಗಳನ್ನು ಹಿಡಿದ ಸಾಹಸಿಗರಿಗೆ ಬಹುಮಾನ ನೀಡುವುದಾಗಿ ರೈತರು ಘೋಷಿಸಿ ಸ್ಪರ್ಧಾ ಕಣವನ್ನು ಇನ್ನಷ್ಟು ರಂಗೇರಿಸಿದರು. ಹೋರಿಗಳ ಬೆನ್ನು ಹತ್ತಿ ಕೊಬ್ಬರಿ ಹರಿದುಕೊಳ್ಳಲು ಮುಗಿಬಿದ್ದ ಯುವಕರು ವಿಶೇಷವಾಗಿ ಗಮನ ಸೆಳೆದರು. ಒಟ್ಟಾರೆ ಹರ್ಷೋದ್ಗಾರದ ನಡುವೆ ಜರುಗಿದ ಹೋರಿ ಬೆದರಿಸುವ ಸ್ಪರ್ಧೆ ರೋಚಕ ಅನುಭವ ನೀಡಿತು. ಸುತ್ತಲಿನ ಹಲವಾರು ಗ್ರಾಮಗಳ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.