ADVERTISEMENT

ವಿದ್ಯಾರ್ಥಿ, ಪಾಲಕರ ಪ್ರತಿಭಟನೆ

ಪ್ರಭಾರ ಮುಖ್ಯಶಿಕ್ಷಕಿ ಮಂಜುಳಾ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 8:41 IST
Last Updated 11 ಸೆಪ್ಟೆಂಬರ್ 2013, 8:41 IST

ರಾಣೆಬೆನ್ನೂರು: ಇಲ್ಲಿನ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರಬಾರಿ ಮುಖ್ಯಶಿಕ್ಷಕಿ ಮಂಜುಳಾ.ಯು. ಅವರ ಅಮಾನತು ಆದೇಶ­ವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಶಾಲೆಗೆ ಬೀಗ ಹಾಕಿ  ಪ್ರತಿಭಟನೆ ನಡೆಸಿದರು.

ಮಂಜುಳಾ.ಯು. ಅವರು ಆದರ್ಶ ಶಿಕ್ಷಕಿಯಾಗಿದ್ದು, ವಿದ್ಯಾರ್ಥಿಗಳಿಗೆ ಬೇಧಭಾವ ಇಲ್ಲದೆ ಪಾಠ ಮಾಡುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣ ನೀಡಿ ಶಾಲೆಗೆ ಬರುವಂತೆ ಪ್ರೋತ್ಸಾಹಿಸುತ್ತಿದ್ದಾರೆ.


ಕೇವಲ ಪಠ್ಯ ವಿಷಯಗಳಿಗಷ್ಟೆ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊ­ಳ್ಳಲು ಪ್ರೇರೆಪಿಸುತ್ತಿದ್ದರು. ಹಿಂದಿ ಭಾಷಾ ಶಿಕ್ಷಕಿಯಾಗಿದ್ದರೂ ವಿಜ್ಞಾನ ಮತ್ತು ಇಂಗ್ಲಿಷ್‌ ಭಾಷೆ ಕಲಿಸಲು ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದರು. 

ಕೆಎಸ್‌ಕ್ಯೂ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ರಾಜ್ಯಕ್ಕೆ ಎರಡನೇ ರಾ್ಯಂಕ್‌ ಬರಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕಿ ಮಂಜುಳಾ ಅವರನ್ನು ಅಮಾನತು ಮಾಡಲಾ­ಗಿದೆ. ಅವರ ಮೇಲಿನ ಆರೋಪವೂ ಆಧಾರ ರಹಿ­ತ­ವಾಗಿದ್ದು, ಅವರ ಅಮಾನತು ಆದೇಶ­ವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾ­ಕಾರರು ಒತ್ತಾಯಿಸಿದರು.
ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಅಮಾನತ್ತು ಗೊಂಡ ಶಿಕ್ಷಕಿ ಮಂಜಳಾ ಅವರ ಬಗ್ಗೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷ­ಣಾಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಚರ್ಚಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಲಕ್ಷ್ಮಣ ಅವರಿಗೆ ವಿದ್ಯಾ­ರ್ಥಿ­ಗಳು ಮುತ್ತಿಗೆ ಹಾಕಿ ಅಮಾನತು ಆದೇಶ­ವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. 

ನಂತರ ಅಮಾನತು ಆದೇಶ ರದ್ದುಗೊ­ಳಿ­ಸುವ ಕುರಿತು ಮೇಲಾಧಿಕಾರಿಗಳೊಂದಿಗೆ ಚೆರ್ಚಿಸಿ ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಬಸಲಿಂಗಯ್ಯ ಹಿರೇಮಠ, ಶಂಕ್ರಪ್ಪ ಗುತ್ತಲ, ಆರ್.ವೈ. ಸಾಂಗ್ಲೀಕರ, ಷಣ್ಮುಖಪ್ಪ ಹುಬ್ಬಳ್ಳಿ, ಕುಮಾರ, ಪರುಶುರಾಮ ಬಗಾಡೆ, ದುರು­ಗಪ್ಪ, ಮಹದೇವಪ್ಪ ದೇವರಗುಡ್ಡ, ಭರಮಪ್ಪ ಹಳ್ಳಳ್ಳಿ, ನಾರಾಯಣಪ್ಪ, ಮುಪ್ಪಣ್ಣ ನಿಬ್ಬ­ಗು­ಡ್ಡದ, ರೇಣುಕಾ ಉಪ್ಪಾರ, ಜ್ಯೋತಿ ಕಳ್ಯಾಳ, ಶಿವಪ್ಪ ಗುಡ್ಡಣ್ಣನವರ ಹಾಗೂ ವಿದ್ಯಾರ್ಥಿ ಮುಖಂಡರಾದ ದೀಪಾ ಹಿರೇಮಠ, ಸಹನಾ ನಾಯಕ, ಅನ್ನಪೂರ್ಣ ಶಿಂಗ್ರಿ, ಸೌಭಾಗ್ಯ, ನಾಗ­ವೇಣಿ ಕರೂರು, ಶಿಲ್ಪಾ ಅತಡಕರ, ಜ್ಯೋತಿ ಬಗಾಡೆ, ವಿದ್ಯಾ ಹುಬ್ಬಳ್ಳಿ, ಸಮೀರ್.ಎಚ್, ಸುಮಂತ ತುಕ್ಕಮ್ಮನವರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT