ADVERTISEMENT

ವ್ಯವಸ್ಥೆಯ ‘ಅಂಧತ್ವ’ಕ್ಕೆ ಎದೆಯೊಡ್ಡಿದ ಅವಳಿಗಳು...

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:32 IST
Last Updated 9 ಜನವರಿ 2014, 6:32 IST

ಸವಣೂರ : ಅವಳಿ ಸಹೋದರರು ಇವರು. ಬಣ್ಣದ ಬದುಕಿನ ಕನಸುಗಳಿದ್ದ ಕಣ್ಣುಗಳಿಗೆ ಆವರಿಸಿದ್ದು ಅಂಧತ್ವ ಎಂಬ ಕತ್ತಲು. ಹದಿನಾರರ ಹರೆಯದ ಹೊಸ್ತಿಲಲ್ಲಿ ಎದುರಾದ ಕುರುಡುತನಕ್ಕೆ ಸವಾಲು ಹಾಕಿ, ಮೂರು ದಶಕಗಳ ಏಕಾಂಗಿ ಬದುಕನ್ನು ಕೈ ಹಿಡಿದು ನಡೆಸಿದರು.

ವ್ಯವಸ್ಥೆಯ ಅಂಧತ್ವಕ್ಕೂ ಎದೆಯೊಡ್ಡಿ ಈ ಸಹೋದರರು ನಡೆಸಿದ ಉಳಿವಿಗಾಗಿ ಹೋರಾಟದ ಕಥೆ ಇಂದಿಗೂ ಮುಂದುವರೆದಿದೆ.
ಜನ್ಮನೀಡಿದ ತಂದೆ-ತಾಯಿಯೂ ಅಗಲಿದ ಬಳಿಕ ಅಕ್ಷರಶಃ ಅನಾಥರಾದ ಈ ಸಹೋದರರು, ಒಬ್ಬರ ನೋವಿಗೆ ಇನ್ನೊಬ್ಬರು ಹೆಗಲಾದರು. ಹತ್ತಿರದ ಬಂಧುಗಳು, ಪಿತ್ರಾರ್ಜಿತ ಆಸ್ತಿ, ಸುತ್ತಲಿನ ಸಮಾಜ, ತನ್ನದು ಎನ್ನುವ ಸಮುದಾಯ ದೂರವಾಗುತ್ತಿದ್ದಂತೆ, ಶಾಶ್ವತವಾದ ಅಂಧತ್ವವೊಂದೇ ಇವರ ಸಂಗಾತಿಯಾಯಿತು. ಕುರುಡುತನದೊಂದಿಗೆ ಕೆಲವು ದೈಹಿಕ ನ್ಯೂನತೆಗಳೂ ಉದ್ಭವಿಸಿದವು.

ಪರಸ್ಪರ ಒಬ್ಬರಿಗೊಬ್ಬರು ಆಧಾರವಾಗಿ ಬದುಕಿನ ಬಂಡಿಯನ್ನು ಎಳೆದ ಬಲರಾಮ–-ಕೃಷ್ಣರ ಬಗ್ಗೆ ಆಡಳಿತ ವ್ಯವಸ್ಥೆಯೂ ತನ್ನ ದೃಷ್ಠಿ ದೋಷ ತೋರಿತು.

ಸವಣೂರ ತಾಲ್ಲೂಕಿನ ಕಡಕೋಳ ಗ್ರಾಮದ ಬಲರಾಮ ಗೋವಿಂದಾಚಾರ್‍ಯ ಮನ್ನಾರಿ ಹಾಗೂ ಕೃಷ್ಣಾ ಗೋವಿಂದಾಚಾರ್‍ಯ ಮನ್ನಾರಿ ಎಂಬ ಅವಳಿ ಸಹೋದರರು ಕಣ್ಣಿಲ್ಲದಿದ್ದರೂ ಕಂಡಿದ್ದು ಮಾತ್ರ ಬದುಕಿನ ಕರಾಳತೆಯನ್ನು. ಗ್ರಾಮದ ಮುರುಕು ಕೋಣೆಯೊಂದರಲ್ಲಿ ಮೂರು ದಶಕಗಳ ಕತ್ತಲ ಬದುಕನ್ನು ಸಾಗಿಸಿದರು.

ಸ್ವಂತ ಆಸ್ತಿಯನ್ನೂ ಕಳೆದುಕೊಂಡರು.  ಕುಟುಂಬ ಪರಿವಾರ ಎಂಬ ಪ್ರಾಪಂಚಿಕ ಸುಖಃಗಳಿಂದಲೂ ವಂಚಿತರಾದರು. ಅಂಧತ್ವನ್ನೂ ಮೆಟ್ಟಿ ನಿಂತು ತಮ್ಮ ನಿತ್ಯದ ದಿನಚರಿ, ಅಡುಗೆ ಉಡುಗೆಗಳಲ್ಲಿ ಹಿಡಿತ ಸಾಧಿಸಿಕೊಂಡರು. ಅವರಿವರು ತೋರುವ ಅಲ್ಪ ಅನುಕಂಪ, ನೀಡುವ ಧನ-ಧಾನ್ಯ ವಸ್ತ್ರಗಳಿಂದಲೇ ವರ್ಷಗಳನ್ನು ಕಳೆದರು. ಸುತ್ತಲಿನ ಹತ್ತಾರು ಊರುಗಳನ್ನು ಜೊತೆಯಾಗಿಯೇ ಸುತ್ತುವ ಮೂಲಕ ವಾಸ್ತವತೆಯನ್ನು ಸಹ್ಯವಾಗಿಸಿಕೊಂಡರು. 

ಕುರುಡಾಯಿತು ವ್ಯವಸ್ಥೆ : ಇತ್ತಿಚಿನ ಸರಕಾರಗಳು ಅಂಗವಿಕಲರಿಗೆ ನೀಡುವ ಪಿಂಚಣಿ ಸೌಲಭ್ಯದ ನೆರವು ಲಭಿಸಿದರೂ, ಉಳಿದ ಯೋಜನೆಗಳು ಇವರಿಗೆ ಮರೀಚಿಕೆಯಾಯಿತು.  ಸ್ವಂತ ಸೂರನ್ನು ನೀಡಲೂ ವ್ಯವಸ್ಥೆ ನಿರಾಕರಿಸಿತು. ಎರಡು ವರ್ಷಗಳ ಕಾಲ ಆಶ್ರಯ ಮನೆಗಾಗಿ, ಸರಕಾರದ ಸೌಲಭ್ಯಗಳಿಗಾಗಿ ಹತ್ತಾರು ಕಚೇರಿಗಳನ್ನು ಅಲೆದರೂ ಅದು ನಿಷ್ಫಲವಾಯಿತು. ಈ ಹಂತದಲ್ಲಿ ಸರಕಾರದ ಪಿಂಚಣಿಯೂ ರದ್ದುಗೊಂಡಿದ್ದು, ಸಹೋದರರ ದಿನನಿತ್ಯದ ಅನ್ನಕ್ಕೂ ಸಂಕಷ್ಟಗಳು ಎದುರಾಯಿತು.

ಸವಣೂರ ತಾಲ್ಲೂಕು ಕೇಂದ್ರಕ್ಕೆ, ಕಂದಾಯ ಇಲಾಖೆಯ ಬಾಗಿಲಿಗೆ ಮಾಸಿಕ ಪಿಂಚಣಿಗಾಗಿ ಹತ್ತಾರು ಬಾರಿ ಅಲೆಯುತ್ತಿರುವ ಈ ಸಹೋದರರು ದೈಹಿಕವಾಗಿಯೂ ನಿತ್ರಾಣಗೊಂಡಿದ್ದು, ಅಶಕ್ತತೆ ಅವರನ್ನು ಆವರಿಸಿಕೊಂಡಿದೆ. ವಯೋಸಹಜವಾದ ದೈಹಿಕ ತೊಂದರೆಗಳೂ ಕಾಣಿಸಿಕೊಂಡಿದೆ. ಸುದೀರ್ಘವಾದ ಬದುಕಿನ ಹೋರಾಟದಲ್ಲಿ ಬಡಕಲು ದೇಹ ನಿತ್ರಾಣಗೊಂಡಿದೆ. ಕೃಶರಾದ ಈ ವೃದ್ಧ ಸಹೋದರರನ್ನು ಅಲೆದಾಡಿಸುತ್ತಿರುವ ಇಲಾಖೆಗಳೂ ತಮ್ಮ ಅಂತಃಕರಣದ ಬರಡುತನವನ್ನು ಸಾಬೀತು ಪಡಿಸಿದೆ.

ಸದಸ್ಯತ್ವ ಶುಲ್ಕ ನೀಡಲಾಗದೇ ತಮ್ಮ ಸಂಘಟನೆಗಳ ನೆರವಿನಿಂದಲೂ ಇವರು ವಂಚಿತರಾಗಿದ್ದಾರೆ. ಸಮಾಜದ ಸಂಘಟನೆಗಳಿಗೂ ಇವರು ಅಪ್ರಸ್ತುತರಾಗಿದ್ದಾರೆ. ವಿಧಿಯ ಕಠೋರತೆಯಿಂದ ಬಳಲಿರುವ ಸಹೋದರರು, ಬದುಕಿನ ಹಲವಾರು ಪ್ರಮುಖ ಸಂಗತಿಗಳನ್ನು ಮರೆತಿದ್ದಾರೆ. ಇತ್ತಿಚಿಗೆ ಜನರಿಂದ ಕಿರುಕುಳ ಅನುಭವಿಸುತ್ತಿರುವುದನ್ನೂ ನೋವಿನಿಂದ ತಿಳಿಸುತ್ತಾರೆ. ಸ್ವಂತ ಆಸ್ತಿ ಅನ್ಯರ ಪಾಲಾಗಿರುವ ಬಗ್ಗೆಯೂ ಇವರಲ್ಲಿ ಬೇಸರ ಇದೆ. ಆದರೂ ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಬಲರಾಮ–-ಕೃಷ್ಣರ ಬಿಳಿಯ ಕಣ್ಣುಗಳಲ್ಲಿ ಸ್ವಂತ ಮನೆಯ ಕನಸು ಗೂಡು ಕಟ್ಟಿದೆ. ಸರಕಾರದ ಯೋಜನೆಗಳ ಹಿಡಿ ನೆರವಿಗಾಗಿ ಅವರ ಮನ ಕಾತರಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.