ಹಾವೇರಿ: ಒಂದು ಬೆಡ್ ರೂಮ್ ಮನೆ ನಿರ್ಮಿಸಲು ಕನಿಷ್ಠ ಮೂರರಿಂದ ಆರು ತಿಂಗಳು ಬೇಕಾಗುವುದು ಸಹಜ. ಆದರೆ, ಅಷ್ಟೇ ಸೌಲಭ್ಯದ ಮನೆಯನ್ನು ಮಲೇಷ್ಯಾ ತಂತ್ರಜ್ಞಾನ ಬಳಸಿಕೊಂಡು ಕೇವಲ ಐದೇ ದಿನಗಳಲ್ಲಿ ನಿರ್ಮಿಸಬಹುದಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸಾಮೂಹಿಕ ವಸತಿ ನಿರ್ಮಾಣಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡ ಮೊದಲ ದಿನ ಅಡಿಪಾಯ ತೆಗೆದರೆ, ಎರಡನೇ ದಿನ ಅದಕ್ಕೆ ಕಾಂಕ್ರೀಟ್ ಹಾಕಲಾಗುತ್ತದೆ. ಮೂರನೇ ದಿನ ಗೋಡೆ ಹಾಗೂ ಸ್ಲ್ಯಾಬ್‌ನ ಸೆಂಟರಿಂಗ್ ಮಾಡಿಕೊಳ್ಳಲಾಗುತ್ತದೆ. ನಾಲ್ಕನೇ ದಿನ ಮನೆಯ ಅಚ್ಚು (ಮೋಲ್ಡ್) ಜೋಡಿಸಿ ಆರ್‌ಸಿಸಿ ಕಾಂಕ್ರೀಟ್ ಹಾಕಲಾಗುತ್ತದೆ. ಐದನೇ ದಿನಕ್ಕೆ ಕಿಟಕಿ, ಬಾಗಿಲು ಜೋಡಿಸಿ ವಾಸಯೋಗ್ಯಕ್ಕೆ ಮನೆ ರೆಡಿ ಮಾಡಿಕೊಡಲಾಗುತ್ತದೆ. ಈ ಮನೆ ಸುಮಾರು 50 ವರ್ಷ ಬಾಳಿಕೆ ಬರುತ್ತದೆ.
ಈ ಮನೆ ನಿರ್ಮಾಣಕ್ಕೆ ಇಟ್ಟಿಗೆಗಳು ಬೇಕಿಲ್ಲ. ಹೆಚ್ಚು ಕಾರ್ಮಿಕರ ಅವಶ್ಯಕತೆಯೂ ಇಲ್ಲ. ಈ ಮನೆ ನಿರ್ಮಾಣಕ್ಕೆ ಪ್ರಮುಖವಾಗಿ ಬೇಕಾಗಿರುವುದು ಮನೆಯ ಅಚ್ಚು (ಮೋಲ್ಡ್). ಆ ಅಚ್ಚಿನ ಮೂಲಕ ಕಾಂಕ್ರೀಟ್ ಹಾಕಿ ಇಡೀ ಮನೆ ನಿರ್ಮಿಸುವುದು ಈ ತಂತ್ರಜ್ಞಾನದ ವಿಶೇಷ. ಮನೆಗಳ ಅಚ್ಚುಗಳನ್ನು ಮಲೇಷ್ಯಾದಲ್ಲಿ ತಯಾರು ಮಾಡುವುದರಿಂದ ಇದಕ್ಕೆ ಮಲೇಷ್ಯಾ ತಂತ್ರಜ್ಞಾನದ ಮನೆಗಳೆಂದೇ ಕರೆಯಲಾಗುತ್ತದೆ.
ಗ್ರಾಮೀಣ ಪ್ರದೇಶಕ್ಕೆ ಬಳಕೆ
ಈ ಮೊದಲು ಪ್ರಾಯೋಗಿಕವಾಗಿ ಯಲಹಂಕದಲ್ಲಿ ಈ ತರಹದ ಮನೆಗಳನ್ನು ನಿರ್ಮಿಸಲಾಗಿತ್ತು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಸಾಮೂಹಿಕ ಮನೆಗಳ ನಿರ್ಮಾಣಕ್ಕೆ ಈ ತಂತ್ರಜ್ಞಾನ ಬಳಸಲು ಉದ್ದೇಶಿಸಲಾಗಿದೆ.
ರಾಜ್ಯ ಸರ್ಕಾರ `ವಾಜಪೇಯಿ ನಗರ ವಸತಿ ಯೋಜನೆ~ಯಡಿ ಹಾವೇರಿ ಜಿಲ್ಲೆ ಶಿಗ್ಗಾವಿ, ಬಂಕಾಪುರ ಹಾಗೂ ಸವಣೂರು ಪಟ್ಟಣದಲ್ಲಿ 3,224 ಮನೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಅದೇ ಕಾರಣಕ್ಕಾಗಿ ಈಗಾಗಲೇ ಪ್ರಾಯೋಗಿಕವಾಗಿ ಬಂಕಾಪುರ ಪಟ್ಟಣದಲ್ಲಿ ಒಂದು ಮನೆಯನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಸಚಿವ ಬಸವರಾಜ ಬೊಮ್ಮಾಯಿ.
ಎರಡಂತಸ್ತಿನ ಮನೆ
ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ನಿರ್ಮಿಸಲಾಗುವ ಈ ಮನೆಯನ್ನು ಎರಡು ಅಂತಸ್ತಿನಲ್ಲಿ ಕಟ್ಟಲಾಗುತ್ತದೆ. 280 ಚ.ಅಡಿಯಲ್ಲಿ ನಿರ್ಮಾಣವಾಗುವ ಮನೆಯಲ್ಲಿ ಒಂದು ಹಾಲ್, ಬೆಡ್ ರೂಮ್, ಕಿಚನ್ ಹಾಗೂ ಶೌಚಾಲಯ, ಸ್ನಾನದ ಕೋಣೆ ಇರಲಿದೆ.
ಗೋಡೆ, ಸ್ಲ್ಯಾಬ್ ನಿರ್ಮಿಸುವ ಮುನ್ನವೇ ಕಿಟಕಿ, ಬಾಗಿಲು, ವಿದ್ಯುತ್ ಹಾಗೂ ನಳದ ಪೈಪ್ ಜೋಡಣೆಗೆ ಜಾಗ ಬಿಡಲಾಗಿರುತ್ತದೆ. ಮನೆಗೆ 10 ಸೆ.ಮೀ. ಕಾಂಕ್ರೀಟ್ ಗೋಡೆ, ಐದು ಇಂಚಿನ ಸ್ಲ್ಯಾಬ್ ಇರಲಿದೆ. ಇದಕ್ಕೆ ಎರಡು ಲಕ್ಷ ರೂಪಾಯಿ ಖರ್ಚಾಗಲಿದೆ. ಇದರ ಮೇಲೆ ಮತ್ತೊಂದು ಅಂತಸ್ತಿನ ಮನೆ ನಿರ್ಮಿಸಬಹುದು.
ವಿಶೇಷ ಕಾಂಕ್ರಿಟ್
ಈ ಮನೆಗಳಿಗೆ ಸಾಮಾನ್ಯ ಮನೆ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಬಳಸುವುದಿಲ್ಲ. ಸೆಲ್ಫ್ ಕಾಂಪ್ಯಾಕ್ಟಿಂಗ್ ಕಾಂಕ್ರೀಟ್ (ಎಸ್‌ಎಂಸಿ) ಬಳಸಲಾಗುತ್ತದೆ. ಇದರಲ್ಲಿ ಸಾಮಾನ್ಯ ಕಾಂಕ್ರೀಟ್‌ಗಿಂತ 20-30 ರಷ್ಟು ಹೆಚ್ಚು ಬಾಳಿಕೆ ಬರುವ ರಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಅದರಿಂದ ಈ ಕಾಂಕ್ರೀಟ್‌ಗೆ ತಾನಾಗಿಯೇ ಕ್ಯೂರಿಂಗ್ ಆಗುವ ಗುಣ ಬರಲಿದೆ. ಹೀಗಾಗಿ ಐದೇ ದಿನಗಳಲ್ಲಿ ಮನೆ ನಿರ್ಮಿಸಿದರೂ ವಾಸಕ್ಕೆ ಯೋಗ್ಯವಾಗಿರುತ್ತದೆ ಎನ್ನುತ್ತಾರೆ ಮನೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿ ತಿಮ್ಮೇಶ ಕುಮಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.