ADVERTISEMENT

ಹಾವೇರಿಯಲ್ಲಿ ನಡೆಸಲು ಚಿಂತನೆ: ಉದಾಸಿ

ಬಿಎಸ್‌ವೈ ಬಿಜೆಪಿ ಮರು ಸೇರ್ಪಡೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:20 IST
Last Updated 9 ಜನವರಿ 2014, 6:20 IST

ಹಾವೇರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಮರು ಸೇರ್ಪಡೆಯ ಬೃಹತ್‌ ಸಮಾವೇಶವನ್ನು ಹಾವೇರಿ ಇಲ್ಲವೇ ದಾವಣಗೆರೆಯಲ್ಲಿ ನಡೆಸಲು ಚಿಂತನೆ ನಡೆದಿದೆ ಎಂದು ಕೆಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಬುಧವಾರ ಹಮ್ಮಿಕೊಂಡ ಕೆಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಮಾವೇಶವನ್ನು ಈ ಎರಡು ಊರುಗಳಲ್ಲಿ ಯಾವ ಊರಲ್ಲಿ ನಡೆಸಬೇಕು ಎಂಬುದನ್ನು ಗುರುವಾರ ನಡೆಯುವ ಪಕ್ಷದ ಸಭೆಯಲ್ಲಿ ನಿರ್ಧರಿಸ ಲಾಗುವುದು. ಹಾವೇರಿಯಲ್ಲಿಯೇ ನಡೆಸುವಂತೆ ಯಡಿಯೂರಪ್ಪನವರಲ್ಲಿ ಮನವಿ ಮಾಡಲಾಗಿದೆ. ಅವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯಡಿಯೂರಪ್ಪ ಬಿಜೆಪಿ ಸೇರ್ಪಡೆ ಸಮಾವೇಶ ನಡೆಸಬೇಕೆಂಬ ಬೇಡಿಕೆಯನ್ನು ಬಿಜೆಪಿ ನಾಯಕರಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಅಂತಿಮವಾಗಿ ಸಮಾವೇಶ ಹಾವೇರಿಯಲ್ಲಿ ನಡೆಯುವುದು ಖಚಿತವಾದರೆ, ಕೆಜೆಪಿ ಸಮಾವೇಶಕ್ಕೆ ಸೇರಿದ್ದ ಜನರಿಗಿಂತಲೂ ಹೆಚ್ಚಿನ ಜನರನ್ನು ಸೇರಿಸಿ ಸಮಾವೇಶ ಯಶಸ್ವಿಗೊಳಿಸಲಾಗುವುದು ಎಂದು ಮುಖಂಡರಲ್ಲಿ ಮನವಿ ಮಾಡಿದರು.

ಉದಾಸಿಗೆ ಟಿಕೆಟ್: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಶಿವಕುಮಾರ ಉದಾಸಿಯವರಿಗೆ ಟಿಕೆಟ್ ನೀಡಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ. ಈ ಬಗ್ಗೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ನಂತರ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದು ಮಾಜಿ ಶಾಸಕ ನೆಹರು ಓಲೇಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.