ADVERTISEMENT

ಹೋಬಳಿ ಮಟ್ಟಕ್ಕೆ ಪ್ರಮಾಣ ಪತ್ರ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 6:40 IST
Last Updated 16 ಜನವರಿ 2012, 6:40 IST

ಹಾವೇರಿ: ಕಂದಾಯ ಇಲಾಖೆಯಿಂದ ನೀಡಲಾಗುವ ಆದಾಯ, ಜಾತಿ ಪ್ರಮಾಣ ಪತ್ರವನ್ನು ಹೊರತು ಪಡಿಸಿ 43 ಪ್ರಮಾಣ ಪತ್ರಗಳನ್ನು ಹೋಬಳಿ ಮಟ್ಟ ದಲ್ಲಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿ  ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ ನಂತರ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದರು.

ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವುದಕ್ಕಾಗಿಯೇ ಗ್ರಾಮೀಣ ಭಾಗದ ಜನರು ತಾಲ್ಲೂಕು ಕೇಂದ್ರಗಳಿಗೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಕಡ್ಡಾಯ ಭೇಟಿಗೆ ಆದೇಶ: ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಗ್ರಾಮ ಮಟ್ಟಕ್ಕೆ ತಲುಪಬೇಕಾದರೆ, ತಾಲ್ಲೂಕು ಆಡಳಿತ ಚುರುಕಾಗಬೇಕು. ಜಿಲ್ಲಾಧಿಕಾರಿಗಳು ವಾರದಲ್ಲಿ ಮೂರು ದಿನ ತಾಲ್ಲೂಕುಗಳಿಗೆ, ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ವಾರದಲ್ಲಿ ಒಂದು ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಗೆ ಹಾಗೂ ಉಪ ವಿಭಾಗಾಧಿಕಾರಿಗಳು ವಾರಕ್ಕೆ ಮೂರು ದಿನ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕಲ್ಲದೇ, ಸಿಇಓ ಹಾಗೂ ಉಪ ವಿಭಾಗಾಧಿಕಾರಿಗಳು ತಾವು ಭೇಟಿ ನೀಡಿದ್ದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೂಚಿಸಿದರು. 

 ನಾಳೆಯಿಂದ ವಿಲೇವಾರಿ: ಸಂಧ್ಯಾ ಸುರಕ್ಷಾ ಯೋಜನೆಯಡಿ ಬಂದ ಅರ್ಜಿಗಳನ್ನು ಸೋಮವಾರದಿಂದಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಹಾಳಾಗಿರುವ ರಸ್ತೆಗಳನ್ನು ತಕ್ಷಣವೇ ಕೈಗೆತ್ತಿಕೊಂಡು ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ಹೊಂಡ ರಹಿತ ರಸ್ತೆಗಳನ್ನಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬರುವ ಫೆಬ್ರುವರಿ, ಮಾರ್ಚನಲ್ಲಿ ತಲೆದೋರಲಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಜನವರಿ 30ರೊಳಗೆ ವಿಶೇಷ ಯೋಜನೆಯನ್ನು ರೂಪಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರೂ ಓಲೇಕಾರ, ಜಿ.ಶಿವಣ್ಣ, ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.