ಹಾನಗಲ್: ನಗರ ಆಶ್ರಯ ಸಮಿತಿಗೆ ನೂತನವಾಗಿ ನೇಮಕಗೊಂಡ ಸದಸ್ಯರನ್ನು ಒಳಗೊಂಡು ಪ್ರಥಮ ಆಶ್ರಯ ಸಮಿತಿ ಸಭೆಯು ಶುಕ್ರವಾರ ಇಲ್ಲಿನ ಪುರಸಭೆಯ ಸಭಾ ಭವನದಲ್ಲಿ ನಡೆಯಿತು.
ಆಶ್ರಯ ಯೋಜನೆಯ ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಕುರಿತು ವಿಸ್ಕೃತ ಚರ್ಚೆಗಳ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ತಹಶೀಲ್ದಾರ್, ‘ನಿವೇಶನ, ಮನೆ ರಹಿತರನ್ನು ಗುರುತಿಸಿ ಅಂತಹವರಿಗೆ ಮನೆ ಹಂಚಿಕೆ ಮಾಡುವಲ್ಲಿ ಆಶ್ರಯ ಸಮಿತಿಯ ನೂತನ ಸದಸ್ಯರು ಜವಾಬ್ದಾರಿ ವಹಿಸುವ ಮೂಲಕ ಸಮಾಜ ಮೆಚ್ಚುವಂತಹ ಕೆಲಸ ಮಾಡಬೇಕು’ ಎಂದ ಅವರು, ಪಟ್ಟಣದಲ್ಲಿ ವಸತಿ, ನಿವೇಶನ ರಹಿತರ ಪಟ್ಟಿಯನ್ನು ಸಿದ್ದಪಡಿಸಲು ಒಂದು ತಂಡ ರಚಿಸುವಂತೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ನಂತರ ಸಭೆಯಲ್ಲಿ ನಿವೇಶನ ರಹಿತರ ಯಾದಿ, ನಿವೇಶನವಿದ್ದು, ಮನೆಯಿಲ್ಲದವರ ಯಾದಿ, ಅವಿಭಕ್ತ ಕುಟುಂಬದಲ್ಲಿ ಇಕ್ಕಟ್ಟಾದ ಮನೆಯುಳ್ಳವರ ಯಾದಿ, ಸದ್ಯದಲ್ಲಿ ಲಭ್ಯವಿರುವ ಒಟ್ಟು ನಿವೇಶನ ಯಾದಿ, ಇಂದಿರಾನಗರ, ನವನಗರ ಭಾಗದಲ್ಲಿ ನಿವೇಶನ ಹೊಂದಿದ ಮೂಲ ಮಾಲೀಕರು, ಸದ್ಯ ಮನೆಯಲ್ಲಿ ವಾಸವಿರುವವರ ಮಾಹಿತಿ ಮತ್ತು ಅಲ್ಲಿನ ಸ್ಥಿತಿಗತಿಗಳ ಯಾದಿಯನ್ನು ತಯಾರಿಸುವ ನಿರ್ಣಯ ಮಾಡಲಾಯಿತು.
ಪ್ರಸಕ್ತ ಸಾಲಿನಲ್ಲಿ 300 ಮನೆಗಳನ್ನು ಪುರಸಭೆಯಿಂದ ವಿತರಿಸಲು ಗುರಿ ಹೊಂದಲಾಗಿದೆ. ಅದರಲ್ಲಿ ಮೀಸಲಾತಿ ಪ್ರಕಾರ ಫಲಾನುಭವಿಗಳ ಆಯ್ಕೆಗೆ ಚರ್ಚಿಸಲಾಯಿತು. ಅಲ್ಲದೆ, ಈಗಾಗಲೇ 5 ಎಕರೆ ಸರ್ಕಾರಿ ಜಾಗೆಯನ್ನು ಸ್ವಾಧಿನಪಡಿಸಿಕೊಳ್ಳಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಸರ್ಕಾರದ ಮೇಲೆ ಒತ್ತಡ ತಂದು ನಿವೇಶನಗಳ ಮಂಜೂರಾತಿ ಪಡೆದು ವಿತರಣೆಗೆ ನಿರ್ಣಯ ಕೈಗೊಳ್ಳಲಾಯಿತು.
2012-–13 ನೇ ಸಾಲಿನಲ್ಲಿ ವಿತರಿಸಲಾದ 273 ನಿವೇಶನಗಳನ್ನು ಹೊರತುಪಡಿಸಿ ಉಳಿದಂತೆ ಮನೆ ನಿರ್ಮಾಣಕ್ಕೆ ಬಂದ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಕೈಗೊಳ್ಳಲು ಸಭೆಯು ನಿರ್ಣಯ ಮಾಡಿತು.
ಆಶ್ರಯ ಸಮಿತಿಯ ನೂತನ ಸದಸ್ಯರಾದ ನಾಗಪ್ಪ ಸವದತ್ತಿ, ಗುರುರಾಜ ನಿಂಗೋಜಿ, ಎಂ.ಜಿ.ಪಠಾಣ, ಮಂಜಮ್ಮ ಕಂಚಿಗೊಲ್ಲರ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಹರಿಜನ, ಸದಸ್ಯರಾದ ಅಶೋಕ ಆರೆಗೊಪ್ಪ, ಸಂತೋಷ ಸುಣಗಾರ, ಮಖಬೂಲಹ್ಮದ ಸರ್ವಿ ಕೇರಿ, ನಾಮನಿರ್ದೇಶಿತ ಸದಸ್ಯರಾದ ಘನಶಾಮ್ ದೇಶಪಾಂಡೆ, ರಾಜು ಗುಡಿ, ಮುಖ್ಯಾಧಿಕಾರಿ ಎಚ್.ಎನ್.ಬಜಕ್ಕನವರ ಸಭೆಯಲ್ಲಿದ್ದರು. ಸಮುದಾಯ ಸಂಪರ್ಕ ಅಧಿಕಾರಿ ಶಿವಾನಂದ ಕ್ಯಾಲಕೊಂಡ ನಿರ್ವಹಿಸಿದರು.
ನವನಗರ ಬಡಾವಣೆಯ ಸಂಪೂರ್ಣ ಅಭಿವೃದ್ಧಿಗಾಗಿ ₨ 1 ಕೋಟಿಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸದ್ಯದಲ್ಲಿ ಮಂಜೂ ರಾತಿ ದೊರಕುವ ಭರವಸೆಯಿದೆ
ಮನೋಹರ ತಹಶೀಲ್ದಾರ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.