ಅಕ್ಕಿಆಲೂರ: ಉತ್ತರ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಪುನರುತ್ಥಾನದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಅವರ ಕೊಡುಗೆ ಅಮೂಲ್ಯ ವಾಗಿದೆಯಾದರೂ ರಾಜಕೀಯ, ಸಾಮಾಜಿಕ ಸೇರಿದಂತೆ ಇತರ ಕಾರಣಗಳಿಂದ ಅವರ ಬದುಕು–ಬರಹದ ಮೇಲೆ ಬೆಳಕು ಚೆಲ್ಲುವ ಕೆಲಸ ಈ ಹಿಂದೆ ನಡೆಯದೇ ಇರುವುದು ವಿಪರ್ಯಾಸ ಎಂದು ಕಾದಂಬರಿಕಾರ, ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪವಿರುವ ಶೇಷಗಿರಿ ಗ್ರಾಮದ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಮತ್ತು ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಗುರುವಾರದಿಂದ ಆರಂಭಗೊಂಡ 2 ದಿನಗಳ ಡಾ.ಬೆಟಗೇರಿ ಕೃಷ್ಣಶರ್ಮರ ಕಾವ್ಯಾರ್ಥ ಚಿಂತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಈಗಲಾದರೂ ಕಣ್ತೆರೆದು ಸ್ಮಾರಕ ಟ್ರಸ್ಟ್ ಸ್ಥಾಪಿಸುವ ಮೂಲಕ ಕೃಷ್ಣಶರ್ಮರ ಬದುಕು–ಬರಹದ ಕುರಿತು ಬೆಳಕು ಚೆಲ್ಲುವ ಕಾರ್ಯದಲ್ಲಿ ತೊಡಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಟ್ರಸ್ಟಿಗೆ ಸರ್ಕಾರ ಪ್ರತಿವರ್ಷ ₨ 12 ಲಕ್ಷ ಅನುದಾನ ನೀಡುತ್ತಿದ್ದು, ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುವ ಮೂಲಕ ಜನರ ಹೃದಯಕ್ಕೆ ತಲುಪು ವಂತಹ ಹಲವಾರು ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಜಾಗತೀಕರಣ ಪ್ರಭಾವಕ್ಕೆ ಸಿಲುಕಿ ನಗರ ಪ್ರದೇಶದ ಎಲ್ಲ ಮನಸ್ಸುಗಳು ಭ್ರಷ್ಟಗೊಂಡಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಭ್ರಷ್ಟಗೊಂಡಿರುವ ಮನಸ್ಸುಗಳ ಸಂಖ್ಯೆ ಕಡಿಮೆ ಇರುವುದು ಸಮಾಧಾನಕರ ಸಂಗತಿಯಾಗಿದ್ದು, ಇಂತಹ ಗ್ರಾಮೀಣ ಪ್ರದೇಶಗಳಲ್ಲಿಯೇ ಟ್ರಸ್ಟಿನ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ. ಕೃಷ್ಣಶರ್ಮರ ಕಾವ್ಯದ ಅರ್ಥ ಮತ್ತು ಚಿಂತನೆಯನ್ನು ಪ್ರಸ್ತುತ ಪಡಿಸುವ ಉದ್ದೇಶದಿಂದ 2 ದಿನಗಳ ಕಾವ್ಯಾರ್ಥ ಚಿಂತನ ಶಿಬಿರ ನಡೆಸಲಾಗುತ್ತಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಗಾಯನ ಶಿಬಿರಗಳನ್ನು ಸಹ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಒಂದು ದಿನದ ಕಾವ್ಯರಸಗ್ರಹಣ ಶಿಬಿರ ನಡೆಸಿ, ಸಂಪನ್ಮೂಲ ವ್ಯಕ್ತಿಗಳಿಂದ ಕೃಷ್ಣಶರ್ಮರ ಬದುಕು–ಬರಹದ ಕುರಿತು ಚಿಂಥನ–ಮಂಥನ ನಡೆಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಆಶಯ ನುಡಿ ನುಡಿದ ಸಾಹಿತಿ ಸತೀಶ ಕುಲಕರ್ಣಿ, ಸಣ್ಣ ಕಥೆಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಆರಂಭಿಸಿದ ಶ್ರೇಯಸ್ಸು ಕೃಷ್ಣಶರ್ಮ ಅವರದ್ದು. ಅತ್ಯುತ್ತಮವಾದ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ ಅವರು ಜಾನಪದ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಕಷ್ಟದ ನಡುವೆಯೇ ಸಾಹಿತ್ಯದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೃಷ್ಣಶರ್ಮರ ಬದುಕು ಮತ್ತು ಬರಹವನ್ನು ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಶಿಬಿರ ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಛವಿಯ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎನ್.ಅಡವೀಶ ಮಾತನಾಡಿ, ಈ ಮೊದಲು ವ್ಯವಸ್ಥೆಗೆ ಎಂದಿಗೂ ಸಹ ಬೆಟಗೇರಿ ಕೃಷ್ಣಶರ್ಮ ಅವರನ್ನು ಪರಿಚಯಿಸುವ ಕಾರ್ಯ ನಡೆದಿರಲಿಲ್ಲ. ಕನ್ನಡ ಭಾಷೆಯ ಸತ್ವ ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸುವಲ್ಲಿ ಸಾಹಿತಿಗಳ ಕೊಡುಗೆ ಅಪಾರವಾಗಿದ್ದು, ಮೇರು ಸಾಹಿತಿಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆದಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರು.
ಪ್ರಮುಖರಾದ ಜಿ.ಎಂ.ಅಪ್ಪಾಜಿ, ಪಿ.ಎನ್.ನೋಟದ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು. ನರಸಿಂಹ ಕೋಮಾರ ಪ್ರಾರ್ಥಿಸಿದರು.
ಪ್ರಭು ಗುರಪ್ಪನವರ ಸ್ವಾಗತಿಸಿದರು. ನಾಗರಾಜ್ ಧಾರೇಶ್ವರ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.