ADVERTISEMENT

‘ಪಟ್ಟಣದ ರಸ್ತೆ ವಿಸ್ತರಣೆಗೆ ಅವಕಾಶ ಮಾಡಿಕೊಡಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:42 IST
Last Updated 18 ಡಿಸೆಂಬರ್ 2013, 4:42 IST

ಬ್ಯಾಡಗಿ : ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಿ ಸುಗಮ ಸಂಚಾರ ಕಲ್ಪಿಸಲು ರಸ್ತೆಯನ್ನು 45 ಅಡಿ ವಿಸ್ತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಾಗೂ ಕಟ್ಟಡಗಳ ಮಾಲೀಕರು ರಸ್ತೆ ವಿಸ್ತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿಕೊಂಡರು.

ಇಲ್ಲಿನ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ನಡೆದ ಮುಖ್ಯರಸ್ತೆ ಕಟ್ಟಡ ಮಾಲೀಕರ ಹಾಗೂ ವ್ಯಾಪಾರಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ರಸ್ತೆಯ ವಿಸ್ತರಣೆಗೆ ಸಹಕಾರ ನೀಡಿದ್ದಲ್ಲಿ ಹಳೆಯ ಬ್ಯಾಡಗಿ–ಮೋಟೆಬೆನ್ನೂರ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಪ್ರತಿಯೊಂದು ಹೆದ್ದಾರಿಗಳು ನಿಯಮಾನುಸಾರ ೪೫ಮೀ ಅಗಲವಿರಬೇಕು, ಆದರೆ ಪಟ್ಟಣದ ಮುಖ್ಯರಸ್ತೆ ನಗರ ಮಿತಿಯಲ್ಲಿದೆ. ಹೀಗಾಗಿ ಕಟ್ಟಡಗಳ ಮಾಲೀಕರು 50ಅಡಿ ಜಾಗೆ ಒದಗಿಸಿದ್ದಲ್ಲಿ 40ಅಡಿ ರಸ್ತೆ ನಿರ್ಮಿಸಲಾಗುವುದು. ಇನ್ನುಳಿದ 10ಅಡಿ ಜಾಗೆಯಲ್ಲಿ ಎರಡೂ ಬದಿಗೂ ಪ್ಲಾಟ್‌ಫಾರ್ಮ್‌ ನಿರ್ಮಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಟ್ಟಡಗಳ ಮಾಲೀಕರು ಸೂಕ್ತ ನಿರ್ಧಾರ ತೆಗೆದುಕೊಂಡು ಸಮ್ಮತಿ ನೀಡಿದ್ದಲ್ಲಿ ತಾಲ್ಲೂಕು ಆಡಳಿತ ರಸ್ತೆ ವಿಸ್ತರಣೆಗೆ ಬದ್ಧವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಸಿ.ಶಂಕ್ರಿಕೊಪ್ಪ ಸಭೆಗೆ ತಿಳಿಸಿದರು. .

ಮುಖ್ಯರಸ್ತೆ ಮಾಲೀಕರ ಪರವಾಗಿ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ ಕೆಲ ಕಟ್ಟಡ ಮಾಲೀಕರು ಸಣ್ಣ ಪ್ರಮಾಣದಲ್ಲಿ ಕಟ್ಟಡಗಳನ್ನು ಹೊಂದಿದ್ದಾರೆ. ರಸ್ತೆಯನ್ನು ೪೫ಅಡಿ ವಿಸ್ತರಿಸುವುದರಿಂದ ಸ್ಥಳಾವಕಾಶವಿಲ್ಲದೆ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತದೆ.

ಹೀಗಾಗಿ ರಸ್ತೆಯನ್ನು 40ಅಡಿ ವಿಸ್ತರಿಸಬೇಕು. ಮುಖ್ಯ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಹಾಗೂ ಹೊರಭಾಗದಲ್ಲಿ ಬೈಪಾಸ್ ರಸ್ತೆ  ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಎಂದು ಶೆಟ್ಟರ ಆಗ್ರಹಿಸಿದರು.

ಪಟ್ಟಣದ ಮೂಲಕ ಹಾಯ್ದು ಹೋಗಿರುವ ಗಜೇಂದ್ರಗಡ–ಸೊರಬ ರಾಜ್ಯ ಹೆದ್ದಾರಿಯನ್ನು ಪಟ್ಟಣದ ಹೊರಗೆ ಬೈಪಾಸ್ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ವಕೀಲ ಎಸ್‌.ಎಸ್‌.ಶೆಟ್ಟರ ಮನವಿ ಮಾಡಿಕೊಂಡರು.

ಉಪವಿಭಾಗಾಧಿಕಾರಿ ಮಹ್ಮದ ಜುಬೇರ್, ಎಪಿಎಂಸಿ ಸದಸ್ಯ ಎಸ್‌.ಸಿ.ಶಿಡೇನೂರ, ತಹಶೀಲ್ದಾರ ಶಿವಶಂಕರ ನಾಯಕ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ ರಾಜಶೇಖರ ಹರಮಗಟ್ಟಿ, ಪುರಸಭೆ ಕಿರಿಯ ಎಂಜಿನಿಯರ್‌ ನಿರ್ಮಲಾ, ಮುಖ್ಯ ರಸ್ತೆ ವ್ಯಾಪಾರಸ್ಥರಾದ ವಿರೂಪಾಕ್ಷಪ್ಪ ಎಲಿಗಾರ, ಅಶೋಕ ಜೈನ್, ಮಂಜುನಾಥ ಶಿರವಾಡಕರ, ಮಾರುತಿ ಹಂಜಗಿ, ವೀರೆಂದ್ರ ಶೆಟ್ಟರ, ಬಿ.ಪಿ ಚನ್ನಗೌಡ್ರ, ಮಂಜುನಾಥ ಗದಗಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.