ADVERTISEMENT

ಸಾರಿಗೆ ಸೌಕರ್ಯಕ್ಕೆ 15 ದಿನಗಳ ಗಡುವು

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:08 IST
Last Updated 31 ಜುಲೈ 2019, 14:08 IST
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆ
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆ   

ಹಾವೇರಿ: ಜಿಲ್ಲೆಯಲ್ಲಿರುವ ಎಲ್ಲ ಶಾಲಾ–ಕಾಲೇಜು ವಿದ್ಯಾರ್ಥಿಗಳ ಸಾರಿಗೆ ಸೌಕರ್ಯ ಹಾಗೂ ಪ್ರಯಾಣದ ಸುರಕ್ಷತೆ ಕುರಿತಂತೆ ಪರಿಶೀಲನೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದ ಅವರು, ‘ಸರ್ಕಾರಿ ಸಾರಿಗೆ ವ್ಯವಸ್ಥೆ ಮಾತ್ರವಲ್ಲದೇ, ಖಾಸಗಿ ಶಾಲೆಗಳು ಹೊಂದಿರುವ ಬಸ್‌ಗಳ ಸ್ಥಿತಿಗತಿಯ ಬಗ್ಗೆಯೂ ಪರಿಶೀಲಿಸಬೇಕು. ಅಗತ್ಯವಿದ್ದರೆ ಅವುಗಳ ನವೀಕರಣಕ್ಕೂ ಶಿಫಾರಸು ಮಾಡಬೇಕು’ ಎಂದು ಸಾರಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

‘ನಗರದ ಗಾಂಧಿಪುರ, ಇಜಾರಿಲಕ್ಮಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಕೂಡಲೇವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದೆಡೆ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಬೇಕು’ ಎಂದರು.

ADVERTISEMENT

‘ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಯಾವುದೇ ಕಾರಣಕ್ಕೂ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸಬಾರದು. ಮಾಲೀಕರೇ ಅವರಿಗೆ ವಾಹನದ ವ್ಯವಸ್ಥೆ ಮಾಡಬೇಕು. ಅಥವಾ, ಕರಾರಿನ ಮೇರೆಗೆ ಬಸ್ ಹೊಂದುವಂತೆ ಕಾರ್ಮಿಕ ಅಧಿಕಾರಿಗಳು ವಿಶೇಷ ಅಭಿಯಾನದ ಮೂಲಕ ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚಿಸಬೇಕು’ ಎಂದೂ ಅವರು ಸೂಚಿಸಿದರು.

‘ಯಾವ್ಯಾವ ಜನವಸತಿ ಪ್ರದೇಶಗಳಿಗೆ ಬಸ್‌ ಸಂಪರ್ಕವಿಲ್ಲ? ಅದಕ್ಕೆ ಕಾರಣವೇನು? ಎಂಬ ಬಗ್ಗೆ ಸಮಗ್ರ ವರದಿ ಕೊಡಬೇಕು.ಪ್ರತಿ ಜಿಲ್ಲೆಯ ಪ್ರಾದೇಶಿಕ ಕಚೇರಿಯಲ್ಲೂ ಪ್ರತ್ಯೇಕವಾಗಿ ರಸ್ತೆ ಸುರಕ್ಷತಾ ವಿಭಾಗ ತೆರೆಯಲು ಅವಕಾಶವಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಜರೂರಾಗಿ ಕ್ರಮ ವಹಿಸಬೇಕು’ ಎಂದರು.

ಟ್ರಕ್ ಟರ್ಮಿನಲ್ ಸ್ಥಾಪಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಣೆಬೆನ್ನೂರು ಅಥವಾ ಹಾವೇರಿ ಬಳಿ ಜಮೀನು ಗುರುತಿಸುವಂತೆಯೂ ನಗರ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಿದರು.

ಜಂಟಿ ಸಮೀಕ್ಷೆಗೆ ಸೂಚನೆ

‘ರಸ್ತೆ ಗುಂಡಿಗಳು, ಅವೈಜ್ಞಾನಿಕ ತಿರುವುಗಳು, ಅಪಘಾತ ಹೆಚ್ಚಿರುವ ಸ್ಥಳಗಳನ್ನು ಗುರುತಿಸಲು ಸಾರಿಗೆ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು. ಈ ಕುರಿತಂತೆ ವಿಸ್ತೃತ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧವೂ ಕಾರ್ಯಾಚರಣೆ ನಡೆಸಬೇಕು. ಹೆದ್ದಾರಿಗಳಲ್ಲಿ ಪೆಟ್ರೋಲಿಂಗ್ ಗಸ್ತು ವಾಹನಗಳನ್ನು ಹೆಚ್ಚಳ ಮಾಡಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.