ADVERTISEMENT

32 ಅತಿಸೂಕ್ಷ್ಮ ಮತಗಟ್ಟೆ, 6 ಚೆಕ್‌ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 7:13 IST
Last Updated 22 ಮಾರ್ಚ್ 2014, 7:13 IST

ನರಗುಂದ: ಲೋಕಸಭಾ ಚುನಾವಣೆಗೆ ನರಗುಂದ ಮತಕ್ಷೇತ್ರದಲ್ಲಿ ಒಟ್ಟು 209 ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಹೊಸದಾಗಿ ಸೇರ್ಪಡೆಗೊಂಡ ಮತದಾರರ ಸಂಖ್ಯೆ ಮೇಲೆ ಇನ್ನು ಹೆಚ್ಚಿನ ಮತಗಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದೆಂದು ಸಹಾಯಕ ಚುನಾವಣಾಧಿಕಾರಿ ಅಶೋಕ ಕಲಘಟಗಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಕೇಂದ್ರಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಅತಿಸೂಕ್ಷ್ಮ 32 ಮತಗಟ್ಟೆಗಳನ್ನು ಗುರುತಿಸಲಾಗಿದೆ.  ವ್ಯವಸ್ಥಿತವಾಗಿ  ಮತದಾನ ನಡೆಯುವಂತೆ  ನೋಡಿಕೊಳ್ಳಲಾಗುವುದು. ಮೂರು ಕಡೆ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.  ಸವದತ್ತಿ  ರಸ್ತೆಯಲ್ಲಿ  ಆಚಮಟ್ಟಿ ಕ್ರಾಸ್‌ ಬಳಿ, ಕೊಣ್ಣೂರಿನ ಶಿರೋಳ ಕ್ರಾಸ್‌ ಬಳಿ ಹಾಗೂ  ಪಟ್ಟಣದ ಆಯಿಲ್‌ ಕ್ರಾಸ್‌ ಸೇರಿದಂತೆ ಮೂರು ಕಡೆ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಈ ಚೆಕ್‌ ಪೋಸ್ಟ್‌ನಲ್ಲಿ ಒಬ್ಬ ಅಬಕಾರಿ ಅಧಿಕಾರಿ, ಒಬ್ಬ ಪೊಲೀಸ್‌ ಹಾಗೂ ವಿಡಿಯೋ ಗ್ರಾಫ್‌ರ ಇರುತ್ತಾರೆ.  ಮೂರು  ಸಂಚಾರಿ ಜಾಗೃತ ದಳ, 3 ಎಂಸಿಸಿ ತಂಡ, ಮೂವರು ವಿಡಿಯೋಗ್ರಾಫರ್ಸ, 16 ಸೆಕ್ಟರ್‌ ಅಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶಿಸ್ತುಬದ್ಧವಾಗಿ ಚುನಾವಣೆ ನಡೆಯುವಂತೆ ಎಲ್ಲ ಸಿದ್ದತೆ ಮಾಡಲಾಗುತ್ತಿದೆ. ಇದೇ 30 ಹಾಗೂ ಏಪ್ರಿಲ್‌ 12ರಂದು ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಕಲಘಟಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ಕೊತಬಾಳ ಮಾತನಾಡಿ, ನರಗುಂದ  ಮತಕ್ಷೇತ್ರದಲ್ಲಿ 1,72,907 ಮತದಾರರಿದ್ದು, ಹೊಸದಾಗಿ 4,400 ಅರ್ಜಿ ಬಂದಿದ್ದು ಅವುಗಳ ಸೇರ್ಪಡೆ ನಂತರ  ಒಟ್ಟು ಮತದಾರರ ಸಂಖ್ಯೆ ತಿಳಿದು ಬರುತ್ತದೆ ಎಂದರು. ಈ ಸಂದರ್ಭದಲ್ಲಿ ನೋಡಲ್‌ ಅಧಿಕಾರಿ ಎಸ್‌.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ರಾಜಶೇಖರ, ಪಣಿಬಂದ, ವೇಲೂರು, ಮಾರುತಿ ಮೇಗಲಮನಿ ಹಾಜರಿದ್ದರು.

6 ಚೆಕ್‌ಪೋಸ್ಟ್‌
ರೋಣ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಯಾವುದೇ ಹಣ ಹೆಂಡ ಸರಬರಾಜು ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ರೋಣ ಮತಕ್ಷೇತ್ರ ವ್ಯಾಪ್ತಿಯಲ್ಲಿ 6ಚೆಕ್‌ ಪೋಸ್ಟ್‌ ತೆರೆಯಲಾಗಿದೆ ಎಂದು ರೋಣ ತಹಶೀಲ್ದಾರ್‌ ಎ.ಜಿ.ಪಂಡಿತ ತಿಳಿಸಿದ್ದಾರೆ.

ಒಬ್ಬ ತಾಲ್ಲೂಕು ಹಿರಿಯ ಅಧಿಕಾರಿ ಸೇರಿದಂತೆ ಪ್ರತಿ ತಂಡದಲ್ಲಿ ಅಬಕಾರಿ, ಪೊಲೀಸ್‌, ಅರಣ್ಯ, ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿಯಲ್ಲಿ ನಿಯುಕ್ತಗೊಳಸಲಾಗಿದೆ.

ಹಿರೇಹಾಳ ಚೆಕ್‌ ಪೊಸ್ಟ್ ಮುಖ್ಯಸ್ಥರಾಗಿ ನೀರಾವರಿ ನಿಗಮದ ಸಹಾಯಕ ಎಂಜನೀಯರ ಜಗದೀಶ ಮಡಿವಾಳರ (9900471058), ಪುರ್ತಗೇರಿ ಕ್ರಾಸ್‌ ಚೆಕ್ ಪೊಸ್ಟ್‌ ಮುಖ್ಯಸ್ಥರಾಗಿ ಉಪವಲಯ ಅರಣ್ಯ ಅಧಿಕಾರಿ ಟಿ.ವೈ.ಜೋಗಿನ (9620011012), ಇಳಕಲ್‌ ಚೆಕ್ ಪೋಸ್ಟ್‌ ಮುಖ್ಯಸ್ಥರಾಗಿ ಗಜೇಂದ್ರಗಡ ವಿಶೇಷ ತಹಶೀಲ್ದಾರ್‌ ಪಿ.ಬಿ.ಮೇಗಲಮನಿ (7483086617),ಬೆಳವಣಕಿ ಕ್ರಾಸ್ ಹತ್ತಿರದ ಚೆಕ್‌ ಪೊಸ್ಟ ಮುಖ್ಯಸ್ಥರಾಗಿ ತಾಲ್ಲೂಕು ರೇಷ್ಮೇ ವಿಸ್ತರಣಾಧಿಕಾರಿ ಚನ್ನಪ್ಪಗೌಡ್ರ (9448564400), ಹಾಳಕೇರಿ ಕ್ರಾಸ್ ಹತ್ತಿರದ ಚೆಕ್‌ ಪೋಸ್ಟ್‌ ಮುಖ್ಯಸ್ಥರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯವಸ್ಥಾಪಕ ಎಸ್‌.ಎಸ್‌.ಕೊಡಿಹಾಳ (9448316525), ಹಳಿಕೇರಿ ಕ್ರಾಸ್ ಹತ್ತಿರದ ಚೆಕ್‌ ಪೊಸ್ಟ ಮುಖ್ಯಸ್ಥರಾಗಿ ಮುಂಡರಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಬಿ. ಬಸವರಾಜು (9481565378) ಇವರುಗಳನ್ನು ನಿಯುಕ್ತಗೊಳಿಸಲಾಗಿದೆ ಎಂದು ತಹಶೀಲ್ದಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಕಲ್ಪ ಪತ್ರ
ರೋಣ:
ಗ್ರಾಮ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನ ಆಗುತ್ತಿರುವ ಪ್ರದೇಶಗಳಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡುವಂತೆ ಸಂಕಲ್ಪ ಪತ್ರ ಪಡೆಯಲು ಕ್ರಮ ಜರುಗಿಸಲಾಗುತ್ತಿದೆ ಎಂದು ನೋಡಲ್ ಅಧಿಕಾರಿ ಬಿ.ವಿ.ರಾಜೇಂದ್ರ ಪ್ರಸಾದ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಈಚೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪುರಸಭೆ, ಪಟ್ಟಣ ಪಂಚಾಯಿತ ಹಾಗೂ ಸ್ವೀಫ್ ಸಮೀತಿಯ ಸದಸ್ಯರಿಗೆ ನಡೆದ ಚುನಾವಣಾ ಪೂರ್ವ ಮತದಾನ ಜಾಗೃತಿ ವಿಷಯ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಸಂಕಲ್ಪ ಪತ್ರ ಪಡೆಯಲು ಗ್ರಾಮ ಪಂಚಾಯಿತಿ  ಪಿ.ಡಿ.ಒ ನೇತೃತ್ವದ ತಂಡ ಮನೆ ಮನೆಗೆ ಭೇಟಿ ನೀಡಲಿದೆ ಎಂದರು.
ಇದೇ 25 ರಂದು ಹಾಗೂ ಏಪ್ರಿಲ್ 10 ರಂದು ಆಯಾ ಗ್ರಾಮದಲ್ಲಿ ಪ್ರಬಾತಪೇರಿ ಹೊರಡಿಸಿ ಮತದಾರರ ಜಾಗೃತಿಗೆ ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದರು

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ  ಇದೇ 27 ರಂದು ಪ್ರೌಢಶಾಲೆ ವಿದ್ಯಾರ್ಥಿಗಳ ಜಾಥಾ ಜರುಗಿಸಬೇಕು.  ಶಾಲಾ ಮಕ್ಕಳ ಪ್ರಬಾತ ಪೇರಿಯನ್ನು ಇದೇ 28 ರಂದು ತಪ್ಪದೇ ಜರುಗಿಸಲು ಸೂಚಿಸಲಾಗಿದೆ ಮತ್ತು ಈ ಕಾರ್ಯಕ್ರಮದಲ್ಲಿ ಕಲಾ ತಂಡಗಳನ್ನು ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರನ್ನು ಮತ್ತು ಆಶಾ ಕಾರ್ಯಕರ್ತರ ನೆರವನ್ನು ಪಡೆದುಕೊಂಡು ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್.ಪಿಡಶೆಟ್ಟರ ಮಾತನಾಡಿ, ತಾಲ್ಲೂಕಿನಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಸರ್ವರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.