ADVERTISEMENT

‘ಪುಕ್ಕಟೆ ಸಿಗುವ ಯಾವುದೇ ವಸ್ತುವಿಗೆ ಬೆಲೆ ಇರಲ್ಲ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 9:39 IST
Last Updated 10 ಜನವರಿ 2018, 9:39 IST

ಹಾನಗಲ್: ‘ಎಸ್‌.ಸಿ, ಎಸ್‌.ಟಿ ಸಮುದಾಯವು ಸರ್ಕಾರದ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದ್ದರೆ, ಇಂದು ಅವರಲ್ಲಿ ಬಡತನ ಇರುತ್ತಿರಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯಪಟ್ಟರು.

ಮಂಗಳವಾರ ತಾಲ್ಲೂಕಿನ ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್‌.ಸಿ ಹಾಗೂ ಎಸ್‌.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸಿ ಅವರು ಮಾತನಾಡಿದರು.

‘ಪುಕ್ಕಟೆ ಸಿಗುವ ವಸ್ತುವಿಗೆ ಬೆಲೆ ಇರುವುದಿಲ್ಲ. ಹೀಗಾಗಿ ಪ್ರತಿ 3 ತಿಂಗಳಿಗೊಮ್ಮೆ ಮೌಲ್ಯಮಾಪನ ಮಾಡುವ ಮೂಲಕ ಲ್ಯಾಪ್‌ಟಾಪ್‌ ಸದುಪಯೋಗದ ಬಗ್ಗೆ ಶಿಕ್ಷಕರು ನೀಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪದವಿ, ಎಂಜಿನಿಯರಿಂಗ್‌, ಮೆಡಿಕಲ್‌ ಮತ್ತು ಪಾಲಿಟೆಕ್ನಿಕ್‌ ಓದುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶೀಘ್ರವೇ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುವುದು. ಈ ಬಗ್ಗೆ ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು. ‘ಸ್ವಾಮಿ ವಿವೇಕಾನಂದರು ಈ ದೇಶದ ಗೌರವ. ಆದರೆ ವಿವೇಕಾನಂದರನ್ನು ಬಿಜೆಪಿ ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದೆ. ಈ ಸಲ ವಿವೇಕಾನಂದ ಜಯಂತಿಯನ್ನು ಪ್ರತಿ ಕಾಲೇಜಿನಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ’ ಎಂದು ತಿಳಿಸಿದರು.

ಶಾಸಕ ಮನೋಹರ ತಹಸೀಲ್ದಾರ್‌ ಮಾತನಾಡಿ, ‘ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿ ನಿಲಯವನ್ನು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಲೇಜಿಗೆ ಹೆಚ್ಚುವರಿ ಕೊಠಡಿಗಾಗಿ ₹1 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಮಲ್ಲಿಗಾರ, ಅಕ್ಕಿಆಲೂರ, ತಿಳವಳ್ಳಿ ಮತ್ತು ಪಾಲಿಟೆಕ್ನಿಕ್‌ ಕಾಲೇಜಿನ ಒಟ್ಟು 140 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ. ಇದರ ಒಟ್ಟು ಮೌಲ್ಯ ₹7.80 ಲಕ್ಷ ಎಂದು ಶಾಸಕ ಮನೋಹರ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌, ಸಾವಸಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಲೇಹಾಬಾನು ಮುಲ್ಲಾ, ತಿಳವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಪಾಟೀಲ, ಪ್ರಕಾಶಗೌಡ ಪಾಟೀಲ, ನಾಗಪ್ಪ ಸವದತ್ತಿ, ಘನಶಾಮ್‌ ದೇಶಪಾಂಡೆ, ವಿಷ್ಣುಕಾಂತ ಇದ್ದರು.

ಓಟು ಬರುವುದಾದರೂ ಹೇಗೆ?

‘ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ದುರ್ದೈವ ಎಂದರೆ ಈ ವರ್ಗದ ಯುವ ಸಮೂಹ ಮತದಾರ ಪಟ್ಟಿಯಲ್ಲಿ ಪೂರ್ಣಪ್ರಮಾಣದಲ್ಲಿ ಸೇರ್ಪಡೆಯಾಗುತ್ತಿಲ್ಲ. ಹೀಗಾದರೆ, ನಮಗೆ ಓಟು ಬರುವುದಾದರೂ ಹೇಗೆ’ ಎಂದು ಸಚಿವ ರುದ್ರಪ್ಪ ಲಮಾಣಿ ಪ್ರಶ್ನಿಸಿದರು.

ಲ್ಯಾಪ್‌ಟಾಪ್‌ ವಿತರಣೆ ಇಂದು

ರಾಣೆಬೆನ್ನೂರು: ಇಲ್ಲಿನ ಹುಣಸಿಕಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮವು ಬುಧವಾರ (ಜ.10) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸುವರು ಎಂದು ಪ್ರಾಚಾರ್ಯ ಪ್ರೊ.ಎಸ್.ವಿ.ಸಂಗಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.