ADVERTISEMENT

ಸಾಲಗಾರರು ನಾವಲ್ಲ, ಸರ್ಕಾರವೇ ಬಾಕಿದಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 10:32 IST
Last Updated 23 ಜನವರಿ 2018, 10:32 IST
ರೈತರನ್ನು ಉದ್ದೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ರೈತರನ್ನು ಉದ್ದೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಹಾವೇರಿ: ‘ಸಾಲಗಾರರು ನಾವು (ರೈತರು) ಅಲ್ಲ, ಸಾಲವು ನಮ್ಮದಲ್ಲ, ಸರ್ಕಾರವೇ ಬಾಕಿದಾರ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ‘ರೈತರ ಸಾಲ ಮನ್ನಾಕ್ಕೆ ಅರ್ಜಿ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘10ರ ದಶಕದಲ್ಲಿ ದೇಶದಲ್ಲಿ ‘ಹಸಿರು ಕ್ರಾಂತಿ’ ಆರಂಭಗೊಂಡಿತು. ಜನರ ಹಸಿವೆ ನೀಗಿಸುವ ನಿಟ್ಟಿನಿಂದ ಹೆಚ್ಚು ಉತ್ಪಾದಿಸಲು ಸರ್ಕಾರವೇ ರೈತರಿಗೆ ಹೈಬ್ರೀಡ್ ಬೀಜ, ಗೊಬ್ಬರ, ಕೀಟನಾಶಕಗಳನ್ನು ನೀಡಿತು. ಇದರ ಖರೀದಿಗಾಗಿ ಸಾಲವನ್ನೂ ಕೊಟ್ಟಿತು. ರೈತರು ಹೆಚ್ಚು ಹೆಚ್ಚು ಬೆಳೆದು ಜನರ ಹಸಿವು ನೀಗಿಸಿದರು. ಆದರೆ, ರೈತರು ಪಡೆದ ಸಾಲವನ್ನು ಸರ್ಕಾರಗಳು ಭರಿಸಲಿಲ್ಲ. ಇದರಿಂದ ರೈತರ ಸಾಲ ಹೆಚ್ಚುತ್ತಾ ಹೋಯಿತು’ ಎಂದರು.

ADVERTISEMENT

‘ಹೀಗಾಗಿ ರೈತರು ಸಾಲಗಾರರು ಎನಿಸಿಕೊಂಡರು. ಆದರೆ, ಹಸಿವು ಕಟ್ಟಿಕೊಂಡು ರೈತ ಬೆಳೆದ ಉತ್ಪನ್ನಗಳಲ್ಲಿ ‘ಫುಲ್ ಮೀಲ್ಸ್’ (ಭೂರಿ ಭೋಜನ) ಸವಿಯುವವರು ಹಾಗೂ ಹಸಿರು ಕ್ರಾಂತಿ ತಂದ ಸರ್ಕಾರವೇ ಬಾಕಿದಾರರು’ ಎಂದು ಆರೋಪಿಸಿರು.

‘ರೈತರಿಗೆ, ಮಗಳ ಮದುವೆ ಅಥವಾ ಅಪ್ಪನ ತಿಥಿ ಮಾಡಲು ಸಾಲ ನೀಡಿಲ್ಲ?, ದೇಶದ ಜನರ ಹಸಿವು ನೀಗಿಸಲು ಬೆಳೆ ಸಾಲ ನೀಡಲಾಗಿದೆ. ಅಲ್ಲದೇ, ಅವರೇ ಕೊಟ್ಟ ಬೀಜ, ಗೊಬ್ಬರ, ಕೀಟನಾಶಕವನ್ನು ಹೊಲಕ್ಕೆ ಹಾಕಿದರೂ ಮಳೆ ಬಂದಿಲ್ಲ. ಇದು ರೈತರ ತಪ್ಪೇ?’ ಎಂದು ಪ್ರಶ್ನಿಸಿದರು.

‘ಕೃಷಿ ಬೆಲೆ ಆಯೋಗದ ವರದಿ ಪ್ರಕಾರ ಕ್ವಿಂಟಲ್ ಆಹಾರ ಧಾನ್ಯದ ಉತ್ಪಾದನೆಗೆ ತಗಲುವ ವೆಚ್ಚಕ್ಕಿಂತ ₹1 ಸಾವಿರಕ್ಕೂ ಕಡಿಮೆ ಬೆಂಬಲ ಬೆಲೆ ನಿರ್ಧರಿಸುತ್ತಾರೆ. ಹೀಗಾಗಿ ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಆಕಸ್ಮಾತ್, ರೈತರ ಆಸ್ತಿ ಹರಾಜು ಹಾಕಿದರೆ, ಸಿದ್ದರಾಮಯ್ಯ ವಿರುದ್ಧ ಹೋರಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ ಅವರು, ಕೇಂದ್ರವು ರೈತರ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರ ₹ 52 ಸಾವಿರ ಕೋಟಿ ಸಾಲದ ಪೈಕಿ ರಾಜ್ಯ ಸರ್ಕಾರವು ಕೇವಲ ₹8.5 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ಕೃಷಿ ಉತ್ಪನ್ನಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿದರೆ, ಸರ್ಕಾರವೇ ₹1 ಲಕ್ಷ ಕೋಟಿ ರೈತರಿಗೆ ನೀಡಬೇಕಾಗಿದೆ’ ಎಂದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶ್ರೀಮಂತ ಉದ್ಯಮಿಗಳ ₹6 ಲಕ್ಷ ಕೋಟಿ ಸಾಲ ಮತ್ತು ಸಬ್ಸಿಡಿಗಳನ್ನು ಮನ್ನಾ ಮಾಡಿದೆ. ಕಳೆದ 15 ವರ್ಷಗಳಲ್ಲಿ ಕೇಂದ್ರದಿಂದ ₹42 ಲಕ್ಷ ಕೋಟಿ ಮನ್ನಾ ಆಗಿದೆ’ ಎಂದರು.

‘ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಕಂಪೆನಿಗಳು ನಿಮ್ಮನ್ನು ಬಕ್ರಾ ಮಾಡಲು ಯಾತ್ರೆ ಆರಂಭಿಸಿದ್ದಾರೆ. ಪ್ರತಿ ಪಕ್ಷಕ್ಕೊಬ್ಬ ತಲೆಹಿಡುಕ ನಿಮ್ಮ ಗ್ರಾಮದಲ್ಲಿಯೂ ಇರುತ್ತಾನೆ. ಅವನನ್ನು ಹಿಡಿದು ಕೇಳಿ, ‘ನಮಗೆ ‘ಹಿಂದೂ’ ಬೇಡ, ‘ಮುಂದೂ’ ಬೇಡ. ಸಾಲ ಮನ್ನಾ ಹಾಗೂ ಬೆಂಬಲ ಬೆಲೆ ಘೋಷಣೆ ಮಾಡಿಸಲಿ’ ಎಂದರು.

‘ಮಂಜುನಾಥ ಸ್ವಾಮಿ ಆ್ಯಂಡ್ ಕಂಪೆನಿಗಳ ಮೈಕ್ರೋಫೈನಾನ್ಸ್‌ಗಳು ಬಡ್ಡಿ ರಹಿತ ಹಣ ಪಡೆದು ಶೇ 30ಕ್ಕೂ ಅಧಿಕ ಬಡ್ಡಿ ದರದಲ್ಲಿ ನೀಡುತ್ತಿವೆ. ಸಾಲ ವಸೂಲಾತಿಗೆ ಬಂದರೆ ಎಚ್ಚರಿಕೆ ನೀಡಿ. ದೇಗುಲಕ್ಕೆ ವಾರ್ಷಿಕ ₹ 200 ಕೋಟಿಗೂ ಅಧಿಕ ಕಾಣಿಕೆ ಬರುತ್ತದೆ. ಬಡ್ಡಿ ರಹಿತ ಸಾಲ ನೀಡಬೇಕು’ ಎಂದು ಒತ್ತಾಯಿಸಿ ಎಂದರು.

ಕೆ. ಮಂಜುನಾಥ ಗೌಡ, ಮಾಲತೇಶ, ರಾಜ್ಯ ಸಂಚಾಲಕ ಮಹಾಂತೇಶ್ ಎಚ್. ಪೂಜಾರ್, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಟಿ. ಹುಣ್ಣಚಣ್ಣನವರ ಮತ್ತಿತರರು ಭಾಗವಹಿಸಿದ್ದರು.

ಕೊಳವೆಬಾವಿಬಳಿ ಮದುಮಗ

ಕೃಷಿ ಪಂಪ್ ಸೆಟ್‌ಗಳಿಗೆ ನೀಡುವ ವಿದ್ಯುತ್ ಅನ್ನು ಪದೇ ಪದೇ ಕಟ್ ಮಾಡುವ ಕಾರಣ ನವವಿವಾಹಿತ ರೈತರು ಪತ್ನಿಯನ್ನು ಬಿಟ್ಟು ಕೊಳವೆಬಾವಿ ಪಂಪ್ ಬಳಿ ರಾತ್ರಿ ಮಲಗುವ ಸ್ಥಿತಿ ಬಂದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್  ಹೇಳಿದರು.

ಸಿ2+ಶೇ 50 ಜಾರಿ ಮಾಡಿ

‘ಸಿ2 (cost of cultivation) +ಶೇ 50’ ಎಂದರೆ ಯಾವುದೇ ಕೃಷಿ ಉತ್ಪನ್ನಕ್ಕೆ, ಅದರ ಉತ್ಪಾದನಾ ವೆಚ್ಚಕ್ಕಿಂತ ಶೇ 50ರಷ್ಟು ಹೆಚ್ಚುವರಿ ಬೆಲೆ ಸಿಗಬೇಕು ಎಂದು ಡಾ.ಸ್ವಾಮಿನಾಥನ್ ವರದಿ ಮಾಡಿದ ಶಿಫಾರಸು.

ಅಧಿಕಾರಕ್ಕೆ ಬಂದರೆ, ಇದನ್ನು ಜಾರಿ ಮಾಡುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಹೀಗಾಗಿ ಜ. 26ರಂದು ಘೋಷಣೆ ಮಾಡದಿದ್ದರೆ, ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಜ.30 ತನಕ ಅರ್ಜಿ ಸ್ವೀಕಾರ

ರೈತರ ಸಾಲ ಮನ್ನಾ ಅರ್ಜಿಯನ್ನು ಎಲ್ಲ ತಾಲ್ಲೂಕು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಜ.30ರ ಸ್ವೀಕರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್ ಜಿಲ್ಲಾಡಳಿತದ ಪರವಾಗಿ ಪ್ರತಿಕ್ರಿಯೆ ನೀಡಿದರು.

* * 

ಬರ ಬಂದರೆ ಹೈದರಾಬಾದ್ ನಿಜಾಮನೂ ರೈತರ ಸಾಲ, ಕಂದಾಯ, ಕರ ಮನ್ನಾ ಮಾಡುತ್ತಿದ್ದನು. ಆದರೆ, ಪ್ರಧಾನಿಗೇಕೆ ಮನಸ್ಸು ಬರುತ್ತಿಲ್ಲ?
ಕೋಡಿ ಹಳ್ಳಿ ಚಂದ್ರಶೇಖರ್ ರೈತ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.