ADVERTISEMENT

‘ಹಕ್ಕಿ’ ದತ್ತು ಶಾಲೆಯಲ್ಲಿ ಹಾಜರಾತಿ ಹೆಚ್ಚಳ

ಸಾತೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ದತ್ತು ಪಡೆದ ಐಎಫ್ಎಸ್ ಅಧಿಕಾರಿ ಶಂಭುಲಿಂಗ

ರಾಜೇಂದ್ರ ನಾಯಕ
Published 18 ಜನವರಿ 2019, 15:04 IST
Last Updated 18 ಜನವರಿ 2019, 15:04 IST
ಹಂಸಭಾವಿ ಸಮೀಪದ ಸಾತೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹಂಸಭಾವಿ ಸಮೀಪದ ಸಾತೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಹಂಸಭಾವಿ: ಇಲ್ಲಿಗೆ ಸಮೀಪದ ಸಾತೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹಳೇ ವಿದ್ಯಾರ್ಥಿ ಶಂಭುಲಿಂಗ ಹಕ್ಕಿ, ಈಗ ಅಮೆರಿಕಾದಲ್ಲಿ ಭಾರತ ಸರ್ಕಾರದ ವಿದೇಶಾಂಗ ಉಪಕಾರ್ಯದರ್ಶಿ. ಬಹುದೂರ, ಎತ್ತರದ ಸ್ಥಾನಕ್ಕೇರಿದರೂ ಅವರು, ತಾವು ಕಲಿತ ಸರ್ಕಾರಿ ಕನ್ನಡ ಶಾಲೆಯನ್ನು ಮರೆತಿಲ್ಲ. ಸಾತೇನಹಳ್ಳಿ ಶಾಲೆಯನ್ನು ದತ್ತು ಪಡೆದಿದ್ದು, ಹಾಜರಾತಿ ಹೆಚ್ಚಳದಲ್ಲಿ ದಾಖಲೆಯ ಸಾಧನೆಗೆ ಕಾರಣರಾಗುತ್ತಿದ್ದಾರೆ.

ಅವರು ಶಾಲೆಯನ್ನು ದತ್ತು ಪಡೆಯುವ ಪೂರ್ವದಲ್ಲಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳಿದ್ದವು. ಇಲ್ಲಿನ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ವರ್ಗಾವಣೆ ಪಡೆಯುತ್ತಿದ್ದರು. ಇದರಿಂದಾಗಿ ಶಾಲಾ ಮಕ್ಕಳ ದಾಖಲಾತಿಯು 123 ಕ್ಕೆ ಕುಸಿದಿತ್ತು. ಇದನ್ನರಿತ ‘ಹಕ್ಕಿ’ಯವರು 2017ರ ಜನವರಿ 18 ರಂದು ಶಾಲೆಯನ್ನು ದತ್ತು ಪಡೆದು, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಹೆಚ್ಚುವರಿ ಶಿಕ್ಷಕರನ್ನು ಒದಗಿಸಿದರು. ಅಲ್ಲದೇ, ಹೆಚ್ಚುವರಿಯಾಗಿ 8ನೇ ತರಗತಿಯೂ ಮಂಜೂರಾಗಿ ಬಂತು.

ಇದರಿಂದಾಗಿ ಮಡ್ಲೂರು, ಚಿಕ್ಕೋಣ್ತಿ, ಹಂಸಭಾವಿ, ಚಿಕ್ಕೇರೂರ ಗ್ರಾಮಗಳ ಶಾಲೆಗಳಿಂದ 40 ವಿದ್ಯಾರ್ಥಿಗಳು ಮರಳಿ ಬಂದರು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 163ಕ್ಕೇರಿತು. ಪ್ರತಿನಿತ್ಯ ಶೇ 99 ರಷ್ಟು ಹಾಜರಾತಿಯೂ ದಾಖಲಾಗುತ್ತಿದೆ.

ADVERTISEMENT

ಮಕ್ಕಳ ಕಂಪ್ಯೂಟರ್‌ ಕಲಿಕೆಗಾಗಿ ಪ್ರತಿದಿನ 2 ರಿಂದ 3 ತರಗತಿಗಳನ್ನು ಅವರ ಸಹೋದರ ನಾಗರಾಜ ಹಕ್ಕಿ ಉಚಿತವಾಗಿ ನಡೆಸಿಕೊಡುತ್ತಿದ್ದಾರೆ. ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿ, ಕಲಿಕೆಯಲ್ಲಿ ತೊಡಗಿಸುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಎ.ಡಿ.ಬಡೇಘರ ತಿಳಿಸಿದರು.

ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಪ್ರಯೋಗಾಲಯ, ಗ್ರಂಥಾಲಯ, ಹೊಸ ಕಟ್ಟಡಗಳ ನಿರ್ಮಾಣ ಮಾಡಲಾಗುವುದು. ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಷ್ಟು ಪ್ರಬುದ್ಧರನ್ನಾಗಿ ಮಾಡುವಂತೆ ಸರ್ಕಾರಿ ಶಾಲೆಗಳನ್ನು ಬದಲಾವಣೆ ಮಾಡುವ ಗುರಿ ಇದೆ ಎಂದು ಐಎಫ್ಎಸ್ ಅಧಿಕಾರಿ ಶಂಭುಲಿಂಗ ಹಕ್ಕಿ ‘ಪ್ರಜಾವಾಣಿ’ ಗೆ ತಿಳಿಸಿದರು.

ನಮ್ಮೂರ ಶಾಲೆಯ ದೈನಂದಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ದತ್ತು ಪಡೆದ ನಂತರ ಇಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುವಂತಾಗಿದ್ದು, ವಿದ್ಯಾರ್ಥಿಗಳು ಕ್ರೀಡಾಕೂಟ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲೂ ಹೆಸರು ಮಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಶಿಕ್ಷಕರಾದ ಎಸ್.ಬಿ.ಹಳ್ಳಿ, ಪಿ.ಎನ್.ಆರೀಕಟ್ಟಿ, ಆರ್. ಬಿ.ನಿಂಗಾಪುರ, ಎಂ.ಆರ್.ವಿಭೂತಿ, ಕೆ.ಎನ್. ಪುಟ್ಟಪ್ಪ, ಶ್ರಿನಿವಾಸ. ಟಿ.ಎಂ ಅವರು ಶಾಲೆಯಲ್ಲಿ ಇಕೋ ಕ್ಲಬ್, ಪ್ರೇರಣಾ ಕ್ಲಬ್, ವಿಜ್ಞಾನ ಸಂಘ, ಗಣಿತ, ಭಾಷಾ ಸಂಘಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಯನ್ನು ನೀಡುತ್ತಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪ್ರೇಮಿಲವ್ವ ತಳವಾರ, ಉಪಾಧ್ಯಕ್ಷ ರವಿ ಬಾರ್ಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.