ADVERTISEMENT

ಅಕ್ಕಿಆಲೂರು ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ

ಸತತ ಎರಡನೇ ಬಾರಿ ಕಾಯಕಲ್ಪ ಪ್ರಶಸ್ತಿಗೆ ಭಾಜನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:35 IST
Last Updated 9 ಅಕ್ಟೋಬರ್ 2020, 6:35 IST
ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರ
ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರ   

ಅಕ್ಕಿಆಲೂರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತೊಂದು ಬಾರಿ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಇದರೊಂದಿಗೆ ಎರಡನೇ ಬಾರಿ ಪ್ರಶಸ್ತಿ ಪಡೆದ ಆರೋಗ್ಯ ಕೇಂದ್ರ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಮಾನದಂಡ ಆಧರಿಸಿ ಪ್ರತಿವರ್ಷವೂ ಕಾಯಕಲ್ಪ ಪ್ರಶಸ್ತಿ ನೀಡುತ್ತಿದೆ. ಉತ್ತಮ ವೈದ್ಯಕೀಯ ಸೇವೆಯ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಿರುವ ಆರೋಗ್ಯ ಕೇಂದ್ರ ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಶಸ್ತಿ ₹1 ಲಕ್ಷ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆಯೊಂದಿಗೆ ಕೊರೊನಾ ಸಮಯದಲ್ಲಿಯೂ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕೇಂದ್ರ ಯಶ ಕಂಡಿದೆ.

ಏನಿದು ಕಾಯಕಲ್ಪ: ಆರೋಗ್ಯ ಕೇಂದ್ರಗಳನ್ನು ನಾನಾ ಮಾನದಂಡಗಳಡಿ ಪರಿಶೀಲಿಸಿ, ಪ್ರಶಸ್ತಿ ನೀಡಿ ಉತ್ತೇಜಿಸುವುದು ಕಾಯಕಲ್ಪ ಪ್ರಶಸ್ತಿಯ ಮುಖ್ಯ ಉದ್ದೇಶ. ಆಸ್ಪತ್ರೆಗಳ ಸುಧಾರಣೆ, ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲು ಪ್ರಶಸ್ತಿಯ ಮೂಲಕ ಅಗತ್ಯ ಪ್ರೋತ್ಸಾಹ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಕೈಗೊಂಡ ಕ್ರಮ, ಸಿಬ್ಬಂದಿಯ ಕೌಶಲ್ಯ, ದಾಖಲೆಗಳ ಸಂಗ್ರಹ, ತ್ಯಾಜ್ಯ ವಿಲೇವಾರಿ ಸೇರಿದಂತೆ ನಾನಾ ಮಾನದಂಡಗಳಿಗೆ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುತ್ತದೆ.

ADVERTISEMENT

ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿ. ಇನ್ನಷ್ಟು ಮೂಲಭೂತ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ಒದಗಿಸಲು ಸಿಬ್ಬಂದಿಗಳೆಲ್ಲರ ಜತೆಗೂಡಿ ಶ್ರಮಿಸುತ್ತೇವೆ ಎಂದು ಎಕ್ಸ್‌ರೇ ತಜ್ಞ ಕುಬೇರ ಸಾವಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.