ADVERTISEMENT

‘ಮಕ್ಕಳ ಕಳ್ಳತನ ವದಂತಿಗೆ ಕಿವಿಗೊಡಬೇಡಿ’

ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ 112ಕ್ಕೆ ಕರೆ ಮಾಡಿ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 15:24 IST
Last Updated 16 ಸೆಪ್ಟೆಂಬರ್ 2022, 15:24 IST
ಹನುಮಂತರಾಯ, ಎಸ್ಪಿ
ಹನುಮಂತರಾಯ, ಎಸ್ಪಿ   

ಹಾವೇರಿ: ‘ಜಿಲ್ಲೆಯ ವಿವಿಧೆಡೆ ಮಕ್ಕಳ ಕಳ್ಳತನಗಳ ಬಗ್ಗೆ ವದಂತಿ ಹರಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟು, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ ಪ್ರಕರಣಗಳು ದಾಖಲಾಗಿಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸವಣೂರು ತಾಲ್ಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದಲ್ಲಿ ಗುರುವಾರ ಮಹಿಳೆಯೊಬ್ಬರು ಒಬ್ಬ ಬಾಲಕನಿಗೆ ತಿನಿಸು ನೀಡಿ ಅಲ್ಲಿಯೇ ಕುಳಿತು ತಿನ್ನುತ್ತಿದ್ದಾಗ ಗ್ರಾಮಸ್ಥರು ಮಕ್ಕಳನ್ನು ಕಳ್ಳತನ ಮಾಡಲು ಬಂದ್ದಿದಾಳೆ ಎಂದು ತಪ್ಪಾಗಿ ತಿಳಿದು, ಕೂಡಿ ಹಾಕಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಸವಣೂರು ಪೊಲೀಸ್ ಠಾಣೆ ಸಿಬ್ಬಂದಿ ತೆರಳಿ ವಿಚಾರಿಸಿದಾಗ ಮಹಿಳೆ ಸಮರ್ಪಕವಾಗಿ ಉತ್ತರ ನೀಡಿಲ್ಲ.ಅಲ್ಲದೇ ಮಾನಸಿಕ ಅಸ್ವಸ್ಥಳಂತೆ ಕಂಡು ಬಂದಿದ್ದು, ನನ್ನ ಹೆಸರು ಅನಿತಾ, ಸೀತಾ ಎಂದು ಬೇರೆ ಬೇರೆ ಹೆಸರುಗಳನ್ನು ಹೇಳುತ್ತಿದ್ದು, ನಾನು ಬೆಂಗಳೂರಿನ ಮಡಿವಾಳದಿಂದ ನನ್ನ ಗಂಡನನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳಿದ್ದಾಳೆ.

ADVERTISEMENT

ಮಹಿಳೆಯ ಹತ್ತಿರವಿದ್ದ ಚೀಲವನ್ನು ಪರಿಶೀಲಿಸಿದಾಗ ಸಂಶಯಾಸ್ಪದ ವಸ್ತುಗಳು ಕಂಡು ಬಂದಿಲ್ಲ. ಅಲ್ಲದೇ ಈ ಮಹಿಳೆ ಯಾವುದೇ ಅಪರಾಧ ಪ್ರಕರಣಗಲ್ಲಿ ಇದುವರೆಗೂ ಭಾಗಿಯಾಗಿಲ್ಲ ಎಂಬುದು ಖಚಿತವಾಗಿದೆ.ಸದ್ಯ ಈ ಮಹಿಳೆಯನ್ನು ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದು, ಮಹಿಳೆಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುವುದು, ಅನಾವಶ್ಯಕ ತೊಂದರೆ ಕೊಟ್ಟರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.