ADVERTISEMENT

ಸಂಗೀತಕ್ಕೆ ಹಾವೇರಿ ಕೊಡುಗೆ ಅಪಾರ

‘ಗುರು ವಚನ ಪ್ರಭೆ’ ಕಾರ್ಯಕ್ರಮ: ಗವಾಯಿಗಳ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಸ್ಥಾಪಿಸಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:05 IST
Last Updated 27 ಜೂನ್ 2022, 15:05 IST
ಹಾವೇರಿಯ ಸಿಂದಗಿಮಠದಲ್ಲಿ ನಡೆದ ಪಂ.ಪುಟ್ಟರಾಜ ಸೇವಾ ಸಮಿತಿಯ ‘ಗುರುವಚನ ಪ್ರಭೆ’ ಕಾರ್ಯಕ್ರಮದಲ್ಲಿ ಸಿಂದಗಿಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಅವರನ್ನು ಸನ್ಮಾನಿಸಲಾಯಿತು
ಹಾವೇರಿಯ ಸಿಂದಗಿಮಠದಲ್ಲಿ ನಡೆದ ಪಂ.ಪುಟ್ಟರಾಜ ಸೇವಾ ಸಮಿತಿಯ ‘ಗುರುವಚನ ಪ್ರಭೆ’ ಕಾರ್ಯಕ್ರಮದಲ್ಲಿ ಸಿಂದಗಿಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಅವರನ್ನು ಸನ್ಮಾನಿಸಲಾಯಿತು   

ಹಾವೇರಿ: ‘ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ, ಪಂಡಿತ ಪುಟ್ಟರಾಜ ಗವಾಯಿ, ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಸಂಗೀತ ಪ್ರಶಸ್ತಿ ಸ್ಥಾಪಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ದಿಗ್ಗಜರನ್ನು ಸ್ಮರಿಸುವಂತಾಗಬೇಕು’ ಎಂದು ಗದುಗಿನ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.

ಹಾವೇರಿಯ ಸಿಂದಗಿಮಠದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಪುಟ್ಟರಾಜರ ವಚನ ಸಾಹಿತ್ಯ ಸೇವೆಯ ಸ್ಮರಣೆ ನಿಮಿತ್ತ ‘ಗುರು ವಚನ ಪ್ರಭೆ’, ‘ವಚನ ಗೋಷ್ಠಿ’ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿ, ಹಾವೇರಿ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು. ಇದನ್ನು ಸರ್ಕಾರ ಮರೆಯಬಾರದು ಎಂದರು.

ವೀರಶೈವ ಮಹಾಸಭೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಾವು ಹೋರಾಟಕ್ಕೆ ಸಿದ್ಧ. ಇಡೀ ರಾಜ್ಯದ ಸಂಗೀತ ಕ್ಷೇತ್ರದ ಹಿರಿ– ಕಿರಿಯರು ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಇದು ಸಾಧ್ಯ ಎಂದ ಅವರು, ಈ ಪ್ರಶಸ್ತಿ ಕಾರ್ಯಕ್ರಮ ಹಾವೇರಿ ಜಿಲ್ಲೆಯಲ್ಲಿಯೇ ಪ್ರತಿವರ್ಷ ನಡೆಯುವಂತಾಗಬೇಕು. ರಾಷ್ಟ್ರಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರಿಗೆ ಇಂಥ ಪ್ರಶಸ್ತಿ ಸಲ್ಲಬೇಕು ಎಂದರು.

ADVERTISEMENT

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ಹಾವೇರಿ ಜಿಲ್ಲೆಯ ಕೊಡುಗೆ ಇತಿಹಾಸದಲ್ಲಿಯೇ ಅಗ್ರಗಣ್ಯವಾದುದು. ಹಾನಗಲ್ಲ ಲಿಂ.ಕುಮಾರಶಿವಯೋಗಿಗಳವರ ಸಮಾಜಮುಖಿ ಚಿಂತನೆ, ಅಂಧ ಅನಾಥರ ಮೇಲಿನ ಕಾಳಜಿ, ಸಂಗೀತ ಕ್ಷೇತ್ರದ ಬಗೆಗಿದ್ದ ವಿಶೇಷ ಪ್ರೀತಿ ಕಾರಣವಾಗಿಯೇ ಪಂ.ಪಂಚಾಕ್ಷರ ಗವಾಯಿಗಳು ದೊಡ್ಡ ಕೊಡಗೆಯಾದರು. ಈ ಮೂಲಕ ಪುಟ್ಟರಾಜ ಕವಿ ಗವಾಯಿಗಳು ಜಗತ್ತಿನಾದ್ಯಂತ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡುವಂತಾಯಿತು. ಅಂಧರ ಬಾಳಿನ ಬೆಳಕಾದುದಲ್ಲದೆ, ಗದುಗಿನ ವೀರೇಶ್ವರ ಪುಣ್ಯಾಶ್ರಮ ಸಂಗೀತ ಕಲಾವಿದರ ಪಾಲಿನ ತವರಾಯಿತು ಎಂದರು.

ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಮತ್ತು ಸಿಂದಗಿ ಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಮಾತನಾಡಿದರು.

ಕದಳಿ ಮಹಿಳಾ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ, ಹುಕ್ಕೇರಿಮಠದ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಅತಿಥಿಗಳಾಗಿದ್ದರು. ಬೆಳಗಾವಿಯ ಉಪನ್ಯಾಸಕಿ ಮಂಜುಶ್ರೀ ಹಾವಣ್ಣನವರ ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಸಂಚಾಲಕ ಶಿವರಾಜ ಉಜ್ಜನಿ, ಡಾವಣಗೆರೆ ಜಿಲ್ಲಾ ಸಂಚಾಲಕ ಶಿವಬಸಯ್ಯ ಚರಂತಿಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ.ಸುಮಾ ಹಡಪದ, ಸಂಚಾಲಕ ಫಕ್ಕೀರಶೆಟ್ರು ಅಂಗಡಿ, ಜ್ಯೋತಿ ಜಂಬಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಚನ ಗೋಷ್ಠಿ ಕಾರ್ಯಕ್ರಮ ಭಕ್ತರ ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.