ADVERTISEMENT

ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:05 IST
Last Updated 11 ಡಿಸೆಂಬರ್ 2020, 16:05 IST
ಬೆಂಗಳೂರಿನಲ್ಲಿ ಬಂಧಿಸಿರುವ ಸಾರಿಗೆ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಹಾವೇರಿ ನಗರ ಬಸ್‌ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು 
ಬೆಂಗಳೂರಿನಲ್ಲಿ ಬಂಧಿಸಿರುವ ಸಾರಿಗೆ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ಹಾವೇರಿ ನಗರ ಬಸ್‌ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು    

ಹಾವೇರಿ: ‘ಬೆಂಗಳೂರಿನಲ್ಲಿ ಬಂಧಿಸಿರುವ ಸಾರಿಗೆ ಸಂಸ್ಥೆ ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಶುಕ್ರವಾರ ನಗರದಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಕರ್ತವ್ಯಕ್ಕೆ ಬಂದಿದ್ದ ನೌಕರರು ಹಾವೇರಿ ಬಸ್‌ ನಿಲ್ದಾಣದಲ್ಲಿ ಸಮಾಗಮಾಗೊಂಡು, ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಧರಣಿ ಕುಳಿತರು. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ ಸ್ಥಳಕ್ಕೆ ಬಂದು, ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ತೆರಳಲು ಸೂಚನೆ ನೀಡಿದರೂ, ಪ್ರತಿಭಟನಾಕಾರರು ಜಗ್ಗಲಿಲ್ಲ.

ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ವೇತನ ತಾರತಮ್ಯ ಸರಿಪಡಿಸಬೇಕು, ಹಿರಿಯ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯವನ್ನು ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ADVERTISEMENT

ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ಘೋಷಣೆ ಕೂಗುತ್ತಾ ಧರಣಿ ನಡೆಸಿದರು. ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

ಕಂಗಾಲಾದ ಪ್ರಯಾಣಿಕರು

ವಿವಿಧ ಊರುಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಸಾರಿಗೆ ನೌಕರರ ದಿಢೀರ್‌ ಪ್ರತಿಭಟನೆಯಿಂದ ಕಂಗಾಲಾದರು. ಬಸ್‌ ಸಂಚಾರ ರದ್ದುಗೊಂಡಿದ್ದರಿಂದ ಊರು ತಲುಪಲು ಅಕ್ಷರಶಃ ಪರದಾಡಿದರು. ಹಸುಗೂಸುಗಳೊಂದಿಗೆ ಬಂದಿದ್ದ ತಾಯಂದಿರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಅಂಗವಿಕಲರು ದಿಕ್ಕು ಕಾಣದೆ ನಗರ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದರು.

ದುಪ್ಪಟ್ಟು ದರ

ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಸ್ಥಗಿತಗೊಂಡ ಕಾರಣ, ಟೆಂಪೋ ಟ್ರ್ಯಾಕ್ಸ್‌, ಖಾಸಗಿ ಮಿನಿ ಬಸ್‌ಗಳು ದುಪ್ಪಟ್ಟು ದರ ವಿಧಿಸಿ ಪ್ರಯಾಣಿಕರನ್ನು ಹುಬ್ಬಳ್ಳಿ, ರಾಣೆಬೆನ್ನೂರು, ಹಾನಗಲ್‌ ಕಡೆ ಕರೆದೊಯ್ದರು. ಹಾವೇರಿಯಿಂದ ಹುಬ್ಬಳ್ಳಿಗೆ ₹150, ರಾಣೆಬೆನ್ನೂರಿಗೆ ₹80 ದರ ವಿಧಿಸಿದ್ದರು. ಪ್ರಯಾಣಿಕರು ಬೇರೆ ಮಾರ್ಗವಿಲ್ಲದೆ ಕೇಳಿದಷ್ಟು ಹಣ ನೀಡಿ ಪ್ರಯಾಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.