ಬ್ಯಾಡಗಿ: ಪಟ್ಟಣದ ಕೋರ್ಟ್ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಮಾರ್ಚ್ 8ರಂದು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ನ್ಯಾಯಾಧೀಶ ಅಮೋಲ್ ಹಿರೇಕುಡೆ ಹೆಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಮಯ, ಹಣ ವ್ಯರ್ಥವಾಗುವುದನ್ನು ತಡೆಯಲು ಇದು ಸಹಕಾರಿಯಾಗಿದೆ’ ಎಂದರು.
ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ವರ್ಷದಲ್ಲಿ ನಾಲ್ಕು ಬಾರಿ ಲೋಕ ಅದಾಲತ್ ನಡೆಯಲಿದೆ. ಅಪಘಾತ, ಮನೆ, ಇತರೆ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯಗಳು, ಚೆಕ್‌ಬೌನ್ಸ್ ಪ್ರಕರಣ, ಬ್ಯಾಂಕ್‌ಗಳಲ್ಲಿ ಕಟಬಾಕಿದಾರರ (ಎನ್‌ಪಿ) ಹಣ ವಸೂಲಾತಿ, ಭೂಸ್ವಾಧೀನ ಪ್ರಕರಣಗಳನ್ನು ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ ಎಂದರು.
ದಾವೆ ಹೂಡದ ಪ್ರಕರಣಗಳನ್ನೂ ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ಇದರಿಂದ ಇಬ್ಬರ ನಡುವಿನ ಬಾಂಧವ್ಯ ವೃದ್ಧಿಸಲಿದೆ ಎಂದು ಅಭಿಪ್ರಾಯಪಟ್ಟರು.
ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ಕೋರ್ಟ್‌ಗೆ ಪಾವತಿಸಿದ ಶುಲ್ಕವನ್ನು ಮರಳಿಸುವುದರ ಜೊತೆಗೆ ಮೇಲ್ಮನವಿಗೆ ಅವಕಾಶವಿಲ್ಲ ಎಂದರು.
ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಸಾರ್ವಜನಿಕರು ಲೋಕ ಅದಾಲತ್ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು. ಕಟ್‌ಬಾಕಿದಾರ ರೈತರು ಬ್ಯಾಂಕ್ ಮೂಲಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಾವು ಪಡೆದ ಸಾಲದ ಅಸಲಿನಲ್ಲಿ ರಿಯಾಯತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ, ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹಕಾರ್ಯದರ್ಶಿ ಎನ್.ಬಿ.ಬಳಿಗಾರ, ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್.ಲಮಾಣಿ ಇನ್ನಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.