ADVERTISEMENT

ಹಾವೇರಿ | ಶಾಸಕ ಕೋಳಿವಾಡ ಚಿತ್ರದ ಹಾಳೆ ಹರಿದ ಅಪರಿಚಿತರು

ಯುದ್ಧ ಟ್ಯಾಂಕ್‌ ಪ್ರತಿಷ್ಠಾಪನಾ ಕಟ್ಟೆಯಲ್ಲಿದ್ದ ಫೋಟೊ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:27 IST
Last Updated 13 ಆಗಸ್ಟ್ 2025, 2:27 IST
ರಾಣೆಬೆನ್ನೂರಿನಲ್ಲಿ ಯುದ್ಧ ಟ್ಯಾಂಕ್ ಪ್ರತಿಷ್ಠಾಪಿಸಲು ಸಿದ್ಧಪಡಿಸಿರುವ ಕಟ್ಟೆಯಲ್ಲಿದ್ದ ಶಾಸಕ ಪ್ರಕಾಶ ಕೋಳಿವಾಡ ಫೋಟೊದ ಮೇಲಿನ ಹಾಳೆಯನ್ನು ಮಂಗಳವಾರ ಹರಿದು ಹಾಕಿರುವುದು
ರಾಣೆಬೆನ್ನೂರಿನಲ್ಲಿ ಯುದ್ಧ ಟ್ಯಾಂಕ್ ಪ್ರತಿಷ್ಠಾಪಿಸಲು ಸಿದ್ಧಪಡಿಸಿರುವ ಕಟ್ಟೆಯಲ್ಲಿದ್ದ ಶಾಸಕ ಪ್ರಕಾಶ ಕೋಳಿವಾಡ ಫೋಟೊದ ಮೇಲಿನ ಹಾಳೆಯನ್ನು ಮಂಗಳವಾರ ಹರಿದು ಹಾಕಿರುವುದು   

ಹಾವೇರಿ: 1951ರ ಭಾರತ–ಪಾಕಿಸ್ತಾನ್ ಯುದ್ಧದ ಸಂದರ್ಭದಲ್ಲಿ ಬಳಕೆಯಾಗಿದ್ದ ‘ಟಿ– 55 ಶಿವಶಕ್ತಿ ಯುದ್ಧ ಟ್ಯಾಂಕ್‌’ ನಗರದಲ್ಲಿ ಅನಾವರಣವಾಗಲಿದೆ. ಟ್ಯಾಂಕ್ ಪ್ರತಿಷ್ಠಾಪನೆಗೆಂದು ಸುಸಜ್ಜಿತ ಕಟ್ಟೆ ನಿರ್ಮಿಸಲಾಗಿದ್ದು, ಅದರ ಮೇಲೆ ಚಿತ್ರಿಸಲಾಗಿದ್ದ ಶಾಸಕರ ಫೋಟೊದ ಮೇಲಿನ ಹಾಳೆಯನ್ನು ಅಪರಿಚಿತರು ಮಂಗಳವಾರ ಹರಿದು ಹಾಕಿದ್ದಾರೆ.

ಶಾಸಕ ಪ್ರಕಾಶ ಕೋಳಿವಾಡ ಅವರ ಪ್ರಯತ್ನದಿಂದ ರಾಣೆಬೆನ್ನೂರಿಗೆ ಯುದ್ಧ ಟ್ಯಾಂಕ್ ಬರುತ್ತಿದೆ. ಹೀಗಾಗಿ, ಯುದ್ಧ ಟ್ಯಾಂಕ್ ಇರುವ ಕಟ್ಟೆಯ ಸುತ್ತಲಿನ ಕೆಲ ಭಾಗದಲ್ಲಿ ಅವರ ಫೋಟೊ ಚಿತ್ರಿಸಲಾಗಿದೆ. ಅದರ ಜೊತೆಯಲ್ಲಿ ‘ಪಿಕೆಕೆ’ ಎಂಬ ಲಾಂಛನವನ್ನೂ ಬಿಡಿಸಲಾಗಿದೆ.

‘ಸೇನೆಗೆ ಸಂಬಂಧಪಟ್ಟ ಯುದ್ಧ ಟ್ಯಾಂಕ್, ದೇಶದ ಹೆಮ್ಮೆಯ ಸಂಕೇತ. ಇಂಥ ಯುದ್ಧ ಟ್ಯಾಂಕ್ ಮೇಲೆ ರಾಜಕೀಯ ಮುಖಂಡರ ಭಾವಚಿತ್ರ ಹಾಗೂ ಲಾಂಛನಕ್ಕೆ ಅವಕಾಶ ನೀಡಬಾರದು. ಶಾಸಕರು ತಮ್ಮ ಫೋಟೊವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಯುದ್ಧ ಟ್ಯಾಂಕ್‌ ಬಳಸುತ್ತಿದ್ದಾರೆ’ ಎಂದು ಕೂಗಾಡಿದ್ದ ನಾಲ್ವರು ಅಪರಿಚಿತರು, ಮಂಗಳವಾರ ಕಟ್ಟೆ ಬಳಿ ಬಂದು ಫೋಟೊ ಮೇಲಿನ ಹಾಳೆಯನ್ನು ಹರಿದು ಆಕ್ರೋಶ ಹೊರಹಾಕಿದ್ದಾರೆ. ನಂತರ, ಸ್ಥಳದಿಂದ ಹೊರಟು ಹೋಗಿದ್ದಾರೆ.

ADVERTISEMENT

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಆಟೊ ಚಾಲಕರೊಬ್ಬರು, ‘ಸಿದ್ದೇಶ್ವರ ವೃತ್ತದಲ್ಲಿ ಯುದ್ಧ ಟ್ಯಾಂಕ್ ಪ್ರತಿಷ್ಠಾಪನೆಗೆ ಕಟ್ಟೆ ನಿರ್ಮಿಸಲಾಗಿದೆ. ಆಗಸ್ಟ್ 15ರಂದು ಟ್ಯಾಂಕ್ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕೂ ಮುನ್ನವೇ ಕಟ್ಟೆಯ ಅಕ್ಕ–ಪಕ್ಕದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಭಾವಚಿತ್ರ ಚಿತ್ರಿಸಲಾಗಿದೆ. ಜೊತೆಗೆ, ‘ಪಿಕೆಕೆ’ ಲಾಂಛನವನ್ನೂ ಬಿಡಿಸಲಾಗಿದೆ. ಅವೆರಡರ ಮೇಲೂ ಹಾಳೆಯನ್ನು ಹೂದಿಸಲಾಗಿತ್ತು. ಆಗಸ್ಟ್ 15ರಂದು ಫೋಟೊ ಅನಾವರಣಗೊಳಿಸಲು ಯೋಚಿಸಲಾಗಿತ್ತು’ ಎಂದರು.

‘ಮಂಗಳವಾರ ಸ್ಥಳಕ್ಕೆ ಬಂದಿದ್ದ ನಾಲ್ವರು, ಏಕಾಏಕಿ ಕಟ್ಟೆ ಬಳಿ ಹೋಗಿ ಫೋಟೊ ಹಾಗೂ ಲಾಂಛನ ಮೇಲಿನ ಹಾಳೆ ಹರಿದು ಹಾಕಿದ್ದಾರೆ. ಫೋಟೊ ಹಾಗೂ ಲಾಂಛನವನ್ನು ಟೈಲ್ಸ್‌ನಲ್ಲಿಯೇ ಚಿತ್ರಿಸಲಾಗಿದೆ. ಹೀಗಾಗಿ, ಅದನ್ನು ಪೂರ್ಣವಾಗಿ ತೆಗೆಯಲು ಆಗದೇ ಹೊರಟು ಹೋಗಿದ್ದಾರೆ. ಅವರು ಯಾರು ಎಂಬುದು ನಮಗೆ ಗೊತ್ತಿಲ್ಲ’ ಎಂದು ಹೇಳಿದರು.

‘ನಗರಸಭೆಯ ಕೆಲ ಸದಸ್ಯರು ಹಾಳೆ ಹರಿದು ಹಾಕಿದ್ದಾರೆ’ ಎಂಬ ಚರ್ಚೆ ನಗರದಲ್ಲಿ ನಡೆಯುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಸರ್ಕಾರದ ಹಣದಲ್ಲಿ ನಿರ್ಮಿಸಿರುವ ಕಟ್ಟೆಯ ಮೇಲೆ ಶಾಸಕರ ಫೋಟೊ–ಪಿಕೆಕೆ ಲಾಂಛನ ಹಾಕುವುದು ತಪ್ಪು. ಪ್ರೋಟೊಕಾಲ್ ಪ್ರಕಾರ ಹೆಸರು ಹಾಕಿಕೊಂಡರೆ ನಮ್ಮ ಅಭ್ಯಂತರವಿಲ್ಲ  ಅರುಣಕುಮಾರ ಪೂಜಾರ ಬಿಜೆಪಿ ಮುಖಂಡ 
ರುಣಕುಮಾರ ಪೂಜಾರ ಬಿಜೆಪಿ ಮುಖಂಡ

ರಾಜಕೀಯ ಸಲ್ಲದು: ಶಾಸಕ

‘ಜನರಿಗೆ ಯುದ್ಧ ಟ್ಯಾಂಕ್ ತೋರಿಸಬೇಕು. ಅವರಲ್ಲಿ ದೇಶಪ್ರೇಮ ಮೂಡಿಸಬೇಕು. ಪ್ರವಾಸಿ ತಾಣ ಮಾಡಬೇಕೆಂಬ ಉದ್ದೇಶದಿಂದ ಶಾಸಕರ ಅನುದಾನದಲ್ಲಿ ಈ ಕೆಲಸ ಮಾಡಿಸುತ್ತಿದ್ದೇನೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು. ಫೋಟೊ ಮೇಲಿನ ಹಾಳೆ ಹರಿದಿರುವ ಘಟನೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಫೋಟೊ ಹಾಗೂ ಲಾಂಛನವನ್ನು ಕಟ್ಟೆ ಮೇಲೆ ಹಾಕಿಸಬಹುದೆಂದು ತಹಶೀಲ್ದಾರ್ ಅವರು ಹೇಳಿದ್ದರು. ಅದಕ್ಕಾಗಿ ಹಾಕಿಸಿದ್ದೇನೆ. ಕೆಲ ನಗರಸಭೆಯ ಸದಸ್ಯರು ಫೋಟೊದ ಮೇಲಿದ್ದ ಹಾಳೆ ಹರಿದಿರುವುದು ಗಮನಕ್ಕೆ ಬಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.