ADVERTISEMENT

ಯಾವುದೇ ವ್ಯಕ್ತಿ ಬದುಕಿದ್ದಾಗ ಉತ್ಸವ ಮಾಡಿಕೊಳ್ಳುವುದಿಲ್ಲ: ಬಿ.ಸಿ. ಪಾಟೀಲ

ಸಿದ್ದರಾಮೋತ್ಸವದ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 13:33 IST
Last Updated 20 ಜುಲೈ 2022, 13:33 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಹಾವೇರಿ: ‘ಯಾವುದೇ ವ್ಯಕ್ತಿ ಬದುಕಿದ್ದಾಗ ಅವರ ಉತ್ಸವ ಮಾಡಿಕೊಳ್ಳುವುದಿಲ್ಲ. ದೇವರ ಉತ್ಸವಗಳನ್ನು ಮಾತ್ರ ಮಾಡಲಾಗುತ್ತದೆ. ಮನುಷ್ಯ ಬದುಕಿದ್ದಾಗ ದೇವರಾಗಲು ಸಾಧ್ಯವಿಲ್ಲ. ಅತಿವೃಷ್ಟಿ ಮತ್ತು ನೆರೆಯಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಸಮಾಜವಾದಿ ಸಿದ್ದರಾಮಯ್ಯನವರು ‘ಸಿದ್ದರಾಮೋತ್ಸವ’ ಆಚರಿಸಿಕೊಳ್ಳುವುದು ಎಷ್ಟು ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯವಾಡಿದರು.

ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದ್ರಂತೆ’ ಎಂಬಂತೆ ಚುನಾವಣೆಗೆ ಇನ್ನೂ 10 ತಿಂಗಳು ಕಾಲಾವಕಾಶವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗಾಗಿ ಈಗಲೇ ಗುದ್ದಾಟ ಶುರು ಮಾಡಿದ್ದಾರೆ. ಇವರು ಸಿದ್ದರಾಮೋತ್ಸವ, ಅವರು ಶಿವಕುಮಾರೋತ್ಸವ ಮಾಡಿಕೊಳ್ಳುವುದರಿಂದ ಪಕ್ಷದಲ್ಲಿ ದೊಡ್ಡ ಕಂದಕ ಉಂಟಾಗಿ ಅವನತಿಗೆ ಮುನ್ನುಡಿ ಬರೆದಂತಾಗುತ್ತದೆ ಎಂದು ಲೇವಡಿ ಮಾಡಿದರು.

ಅಧಿಕಾರಕ್ಕೆ ಯಾರನ್ನು ತರಬೇಕು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.