ADVERTISEMENT

‘ಮೋದಿ ಅನ್ನದಾತರ ಕ್ಷಮೆ ಕೇಳಲಿ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 16:32 IST
Last Updated 30 ನವೆಂಬರ್ 2020, 16:32 IST
ನವದೆಹಲಿಯಲ್ಲಿ ರೈತರ ಮೇಲೆ ನಡೆಯುತ್ತಿರುವ ಅಮಾನವೀಯ ದಾಳಿಯನ್ನು ಖಂಡಿಸಿ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಎಸ್‌ಎಫ್‌ಐ ವತಿಯಿಂದ ಪ್ರತಿಭಟನೆ ನಡೆಯಿತು 
ನವದೆಹಲಿಯಲ್ಲಿ ರೈತರ ಮೇಲೆ ನಡೆಯುತ್ತಿರುವ ಅಮಾನವೀಯ ದಾಳಿಯನ್ನು ಖಂಡಿಸಿ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಎಸ್‌ಎಫ್‌ಐ ವತಿಯಿಂದ ಪ್ರತಿಭಟನೆ ನಡೆಯಿತು    

ಹಾವೇರಿ: ‘ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಅಮಾನವೀಯ ದಾಳಿಗಳನ್ನು ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕ್ಷಮೆ ಯಾಚಿಸಿ, ಅನ್ನದಾತರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಮೂರು ಕೃಷಿ ವಿಧೇಯಕಗಳನ್ನು ಮತ್ತು ವಿದ್ಯುಚ್ಛಕ್ತಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಪ್ರಗತಿಪರ ಸಂಘನೆಗಳು ಆಯೋಜಿಸಿದ್ದ ಸೌಹಾರ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರೈತರು ದೆಹಲಿಗೆ ಬರುವುದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆದು, ಉಕ್ಕಿನ ಬೇಲಿಗಳನ್ನು ಹಾಕಲಾಗುತ್ತಿದೆ. ಜಲಫಿರಂಗಿಗಳಿಂದ ಕೊರೆಯುವ ಚಳಿಯಲ್ಲಿ ಜಲಪ್ರಹಾರ ನಡೆಸಲಾಗುತ್ತಿದೆ. ಪೊಲೀಸರಿಂದ ಲಾಠಿ ಚಾರ್ಜ್ ಮಾಡುತ್ತಿದೆಯಲ್ಲದೆ ಅಶ್ರುವಾಯು ಸಿಡಿಸಲಾಗುತ್ತಿದೆ. ಅನ್ನದಾತರ ಮೇಲೆ ನಡೆಯುತ್ತಿರುವ ಈ ಕ್ರೌರ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ವಕೀಲ ನಾರಾಯಣ ಕಾಳೆ ಮಾತನಾಡಿ, ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಬದಿಗೊತ್ತಿ ಅನ್ನದಾತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ರೈತ-ಕಾರ್ಮಿಕರ ನೇತೃತ್ವದಲ್ಲಿ ಜನತೆಯ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ಮಂಜುಳಾ ಅಕ್ಕಿ ಮಾತನಾಡಿದರು.ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಸಿಐಟಿಯು ಜಿಲ್ಲಾ ಮುಖಂಡ ಅಂದಾನೆಪ್ಪ ಹೆಬಸೂರು, ಸಾಮಾಜಿಕ ಪರಿವರ್ತನಾ ಜನಾಂದೋಲನ ಮುಖ್ಯಸ್ಥೆ ಹಸೀನಾ ಹೆಡಿಯಾಲ, ಹನುಮಕ್ಕ ತುಮರಿ, ಡಿಎಸ್‍ಎಸ್ ಮುಖಂಡರಾದ ಉಡಚಪ್ಪ ಮಾಳಗಿ, ಹೊನ್ನೇಶ್ವರ ತಗಡಿನಮನಿ, ಪರಶುರಾಮ ಮರೆಣ್ಣವರ, ಜಯ ಕರ್ನಾಟಕ ಸಂಘಟನೆಯ ಸುಭಾಸ್ ಬೆಂಗಳೂರು, ರಮೇಶ ಆನವಟ್ಟಿ, ಕೃಷ್ಣಾ ಕಡಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.