ADVERTISEMENT

‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 4:26 IST
Last Updated 30 ಜನವರಿ 2024, 4:26 IST
ಶಿಗ್ಗಾವಿ ಪಟ್ಟಣದ ಸಂತೆ ಮೈದಾನದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು
ಶಿಗ್ಗಾವಿ ಪಟ್ಟಣದ ಸಂತೆ ಮೈದಾನದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು   

ಶಿಗ್ಗಾವಿ: ಕ್ಷೇತ್ರದ ಜನ ಅಧಿಕಾರ ನೀಡಿದ್ದು, ಕ್ಷೇತ್ರದ ಋಣ ತೀರಿಸಲು ಕೃತಜ್ಞತಾ ಭಾವನೆ ಮುಖ್ಯವಾಗಿದೆ. ಭವಿಷ್ಯದ ದಿನಗಳನ್ನು ಸಾರ್ವಜನಿಕರ ಸೇವಾ ಕಾರ್ಯಕ್ಕೆ ಮೀಸಲಾಗಿಡುತ್ತೇನೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಶಾಸಕ ಬಸವರಾಜ ಬೊಮ್ಮಾಯಿ ಅವರ 64ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಹುಬ್ಬಳ್ಳಿ–ಶಿಗ್ಗಾವಿ ನಡುವೆ ಕೆ.ಎಲ್.ಇ ಸಂಸ್ಥೆಯಿಂದ ಶಿಕ್ಷಣ ಸಂಸ್ಥೆ ಆರಂಭವಾಗಲಿದ್ದು, ಅರಟಾಳದ ರುದ್ರಗೌಡ್ರ ಹೆಸರಿನಲ್ಲಿ ತೆರೆಯಲಾಗುತ್ತಿದೆ. ಹುಬ್ಬಳ್ಳಿ ಎಂ.ಎಂ.ಜೋಶಿ ಅವರ ಸಂಸ್ಥೆಯಿಂದ ಕಣ್ಣಿನ ಆಸ್ಪತ್ರೆ ಸೇರಿದಂತೆ ಮತ್ತಿತರ ಸೇವಾ ಕಾರ್ಯಗಳು ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.

ಕೆ.ಎಲ್.ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೊರೆ ಅವರು ‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಂಸ್ಥೆಯಿಂದ ಸುಮಾರು 309 ಸಂಸ್ಥೆಗಳು ನಡೆಯುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಆಸ್ಪತ್ರೆ ತೆರೆಯುವ ಮೂಲಕ ಆರೋಗ್ಯಯುತ ವಾತಾವರಣ ಮೂಡಿಸಲಾಗುವುದು. ಕೃಷಿ ಕ್ಷೇತ್ರದ ಉನ್ನತಿಗಾಗಿ ಶಾಸಕ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.

ADVERTISEMENT

ಮೂಡಬಿದರಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವಾಸ್ ಅವರಿಗೂ ‘ಶ್ರೇಷ್ಠ ಕನ್ನಡಿಗರು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕ ಅಜ್ಜಂಪೀರ್ ಎಸ್. ಖಾದ್ರಿ, ಶಿವರಾಜ ಸಜ್ಜನ, ಯುವ ಉದ್ಯಮಿ ಭರತ ಬೊಮ್ಮಾಯಿ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಬಸವರಾಜ ಅರಬಗೊಂಡ ಇದ್ದರು.
ನಂತರ ಮೂಡಬಿದರಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.