ADVERTISEMENT

ಕೌಟುಂಬಿಕ ಕಲಹ: ಪತ್ನಿ ಕೊಲೆಗೆ ಯತ್ನಿಸಿದ ಪತಿ

ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ದಂಪತಿ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 16:33 IST
Last Updated 23 ಜನವರಿ 2021, 16:33 IST
ರಾಣೆಬೆನ್ನೂರು ನಗರದ ಗಣೇಶ ನಗರದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು, ನಂತರ ಘಟನಾ ಸ್ಥಳವನ್ನು ಪರಿಶೀಲಿಸಿದರು. ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ
ರಾಣೆಬೆನ್ನೂರು ನಗರದ ಗಣೇಶ ನಗರದ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು, ನಂತರ ಘಟನಾ ಸ್ಥಳವನ್ನು ಪರಿಶೀಲಿಸಿದರು. ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ   

ರಾಣೆಬೆನ್ನೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಣೇಶ ನಗರದ ನಡುರಸ್ತೆಯಲ್ಲಿಯೇ ಪತಿಯು ತನ್ನ ಪತ್ನಿಯ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹಲ್ಲೆ ಮಾಡಿ, ತಾನು ಕೂಡ ಚೂರಿಯಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಲಗೇರಿ ರಸ್ತೆಯ ಸಮೀಪದಲ್ಲಿ ಶನಿವಾರ ನಡೆದಿದೆ.

ಪತ್ನಿ ಮಹಾದೇವಕ್ಕ ತಂಬೂರಿ ಮತ್ತು ಪತಿ ಮೈಲಪ್ಪ ತಂಬೂರಿರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾದರು. ಮಾಹಿತಿ ತಿಳಿದುಸ್ಥಳಕ್ಕೆ ಬಂದ ನಗರ ಠಾಣೆ ಪಿಎಸ್‌ಐ ಪ್ರಭು ಕೆಳಗಿನಮನಿ, ದಂಪತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇಲ್ಲಿನ ಗಣೇಶನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮಹಿಳಾ ಪೂರಕ ಪೌಷ್ಠಿಕ ಆಹಾರ ಘಟಕ ಇದೆ. ಮಹಿಳಾ ಸಂಘದವರು ಆಹಾರದ ಪೊಟ್ಟಣಗಳನ್ನು‌ ಮಾಡಿ ಅಂಗನವಾಡಿಗೆ ಪೂರೈಸುತ್ತಾರೆ. ಇಲ್ಲಿ ಮಹಾದೇವಕ್ಕ ತಂಬೂರಿ ಕೆಲಸ ಮಾಡುತ್ತಿದ್ದರು.

ADVERTISEMENT

‘ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಮಹಾದೇವಕ್ಕ ಬ್ಯಾಡಗಿ ತಾಲ್ಲೂಕಿನ ತನ್ನ ತವರು ಮನೆಯಿಂದ ರಾಣೆಬೆನ್ನೂರಿಗೆ ಕೆಲಸಕ್ಕೆ ಬರುತ್ತಿದ್ದರು. ಶನಿವಾರ ಬೆಳಿಗ್ಗೆಯಿಂದ ಆಕೆ ಬರುವುದನ್ನು ಕಾದು ಹೊಂಚು ಹಾಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಡಿ.ವೈ.ಎಸ್ಪಿ ಟಿ.ವಿ. ಸುರೇಶ, ಸಿಪಿಐ ಎಂ.ಐ. ಗೌಡಪ್ಪಗೌಡ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.