ADVERTISEMENT

ನಂಬಿಸಿ, ಬೆನ್ನಿಗೆ ಚೂರಿ ಹಾಕಿದ್ರು: ನಿ.ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್

‘ನಂಬಿಸಿ, ಬೆನ್ನಿಗೆ ಚೂರಿ ಹಾಕಿದ್ರು’

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 17:46 IST
Last Updated 22 ಜೂನ್ 2022, 17:46 IST
ನಿವೃತ್ತ ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್
ನಿವೃತ್ತ ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್   

ಹಾವೇರಿ: ‘ಕಾಲೇಜಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಯಾರೂ ನನಗೆ ಸುಳಿವು ನೀಡಲಿಲ್ಲ. ನನ್ನ ಕಚೇರಿಯ ಸಿಬ್ಬಂದಿಯನ್ನು ನಾನು ಸಂಪೂರ್ಣ ನಂಬಿದ್ದೆ. ನನಗೆ ನಂಬಿಕೆದ್ರೋಹ ಮಾಡಿ, ಬೆನ್ನಿಗೆ ಚೂರಿ ಹಾಕಿದರು’ಎಂದು ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅವ್ಯವಹಾರ ಪ್ರಕರಣದ ಆರೋಪಿ, ನಿವೃತ್ತ ಪ್ರಾಂಶುಪಾಲ ಡಾ.ಕೆ.ಬಿ.ಪ್ರಕಾಶ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2010ರಿಂದ 2022ರವರೆಗೆ 12 ವರ್ಷಗಳ ಕಾಲ ಪ್ರಾಂಶುಪಾಲನಾಗಿ ಹಾವೇರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಎರಡು ಮೂರು ಸಿಬ್ಬಂದಿ ಕಾಲೇಜು ಹಣವನ್ನು ದೋಚಿ, ಕಟ್ಟಿ ಬೆಳೆಸಿದ್ದ ಸೌಧವೇ ಕುಸಿಯುವಂತೆ ಮಾಡಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ವರದಿಗಳು ಪ್ರಕಟವಾಗಿದ್ದು, ₹3 ಕೋಟಿ ಅಲ್ಲ, ಆಡಿಟ್‌ ಮಾಡಿದರೆ ಇನ್ನೂ ಹೆಚ್ಚಿನ ಹಣ ಲೂಟಿಯಾಗಿರುವುದು ಗೊತ್ತಾಗುತ್ತದೆ’ ಎಂದು ಹೇಳಿದರು.

‘ಕಾಲೇಜಿನ ಚೆಕ್‌ಗಳು ಫೋರ್ಜರಿಯಾಗಿವೆ. ನಾನು ₹2 ಸಾವಿರಕ್ಕೆ ಚೆಕ್‌ ಬರೆದ ನಂತರ ಅದಕ್ಕೆ ಎರಡು ಸೊನ್ನೆ ಸೇರಿಸಿ ₹2 ಲಕ್ಷ ಮಾಡಿಕೊಂಡು ಹಣವನ್ನು ಲೂಟಿ ಮಾಡಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಾನು ಕಾಲೇಜಿನ ಮುಖ್ಯಸ್ಥನಾದ ಕಾರಣ, ನನ್ನನ್ನು ಅವ್ಯವಹಾರ ಪ್ರಕರಣದಲ್ಲಿ ಸಹಜವಾಗಿ ಭಾಗೀದಾರನನ್ನಾಗಿ ಮಾಡಿದ್ದಾರೆ. ಒಂದೇ ಒಂದು ಪೈಸೆ ನಾನು ತಿಂದಿರುವುದು ಸಾಬೀತಾದರೆ, ಯಾವುದೇ ರೀತಿಯ ಶಿಕ್ಷೆಗೆ ಸಿದ್ಧ’ ಎಂದು ಗದ್ಗದಿತರಾದರು.

ADVERTISEMENT

‘ಸ್ಕಾಲರ್‌ಶಿಪ್‌ ಮತ್ತು ಶೈಕ್ಷಣಿಕ ಸಾಲದಿಂದ ವಂಚಿತರಾದ ವಿದ್ಯಾರ್ಥಿಗಳು ನನ್ನ ಬಳಿ ದೂರು ನೀಡಿದ್ದರು. ಆಗ ಸಮಸ್ಯೆ ಬಗೆಹರಿಸಲು ಎಸ್‌ಡಿಎ ರವೀಂದ್ರಕುಮಾರ್‌ಗೆ ಹೇಳಿದ್ದೆ. ಕಾಲ ದೂಡುತ್ತಾ ಬಂದ ಅವರು ಫ್ರೆಬುವರಿಯಿಂದ ಕಾಲೇಜಿಗೆ ಅನಧಿಕೃತ ಗೈರು ಹಾಜರಾಗಿದ್ದಾರೆ. ನಾನೇ ಜೇಬಿನಿಂದ ₹1 ಲಕ್ಷ ಹಣವನ್ನು ವಿದ್ಯಾರ್ಥಿಗಳಿಗೆ ನೀಡಿದ್ದೇನೆ. ಕಾಲೇಜು ಅಭಿವೃದ್ಧಿ ಮೀಸಲಾಗಿರುವ ಸಿಸಿ–ಟೆಕ್‌ ಅಕೌಂಟ್‌ನಿಂದ ₹2.5 ಲಕ್ಷವನ್ನು ಕಾನೂನು ಬಾಹಿರವಾಗಿ ತೆಗೆದು, ಬಡ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ನೀಡಿದ್ದೇನೆ’ ಎಂದರು.

‘33 ವರ್ಷಗಳ ಸರ್ವಿಸ್‌ನಲ್ಲಿ ನನ್ನ ಒಟ್ಟು ಗಳಿಕೆ ₹80 ಲಕ್ಷ. ನನ್ನ ಮನೆ, ಆಸ್ತಿ, ಬ್ಯಾಂಕ್‌ ಬ್ಯಾಲೆನ್ಸ್‌ ಎಲ್ಲವನ್ನು ಕೊಟ್ಟರೂ ಕಾಲೇಜಿನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸರಿದೂಗಿಸಲು ಸಾಧ್ಯವಿಲ್ಲ. ಪ್ರಮಾಣ ಮಾಡಿ ಹೇಳುತ್ತೇನೆ ನಾನು ಭ್ರಷ್ಟಾಚಾರ ಮಾಡಿಲ್ಲ’ ಎಂದು ಸರ್ಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.