ADVERTISEMENT

ನಾಳೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ಚಾಲನೆ

ಎರಡು ನಗರ ಹಾಗೂ ಮೂರು ಗ್ರಾಮೀಣ ಕಚೇರಿಗಳಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 17:34 IST
Last Updated 31 ಆಗಸ್ಟ್ 2018, 17:34 IST
ಹಾವೇರಿ ಅಂಚೆ ಕಚೇರಿ
ಹಾವೇರಿ ಅಂಚೆ ಕಚೇರಿ   

ಹಾವೇರಿ: ಗ್ರಾಮೀಣ ಭಾಗದಲ್ಲೂ ನಗದು ರಹಿತ ವ್ಯವಹಾರ ಕಲ್ಪಿಸುವ, ಬಹು ನಿರೀಕ್ಷಿತ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ ಸೆ.1ರಿಂದ ಆರಂಭಗೊಳ್ಳಲಿದೆ.

ಮಧ್ಯಾಹ್ನ 2 ಗಂಟೆಗೆ ನಗರದ ಶಿವಬಸವ ಕಲ್ಯಾಣಮಂಟಪದಲ್ಲಿ ವಿಭಾಗೀಯ ಮಟ್ಟದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಹಾವೇರಿ ಶಾಖೆಯನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌.ಎಂ. ವಿ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಪಾಲ್ಗೊಳ್ಳುವರು.

ಈ ಕುರಿತು ಮಾಹಿತಿ ನೀಡಿರುವ ಅಂಚೆ ಕಚೇರಿಯ ಮುಖ್ಯ ಅಧೀಕ್ಷಕ ಪಿ. ದಾಮೋದರ್ ಭಟ್, ಜಿಲ್ಲೆಯಲ್ಲಿ ಆರಂಭಿಕವಾಗಿ ಹಾವೇರಿ ಪ್ರಧಾನ ಅಂಚೆ ಕಚೇರಿ, ರಾ‌ಣೆಬೆನ್ನೂರು ಮುಖ್ಯ ಅಂಚೆ ಕಚೇರಿ, ಅರೆಮಲ್ಲಾಪುರ, ಹೊನ್ನತ್ತಿ ಹಾಗೂ ಕಾಕೋಳ ಗ್ರಾಮೀಣ ಶಾಖಾ ಕಚೇರಿಗಳಲ್ಲಿ ಸೇವೆ ಆರಂಭಗೊಳ್ಳಲಿದೆ. ಬಳಿಕ ಕಾರ್ಯವ್ಯಾಪ್ತಿ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಕಾಗದ ರಹಿತ, ನಗದು ರಹಿತ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಹಾಗೂ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಕನಿಷ್ಠ ಬ್ಯಾಲೆನ್ಸ್ ಉಳಿಸಬೇಕು ಎಂಬ ನಿರ್ಬಂಧವಿಲ್ಲ. ₹ 1 ಲಕ್ಷದವರೆಗೆ ಠೇವಣಿ ಇಡಬಹುದು. ಖಾತೆ ತೆರೆಯಲು ಆಧಾರ್‌ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸಾಕು. ವ್ಯವಹಾರದ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ಪಡೆಯಬಹುದು, ಖಾತೆ ಸಂಖ್ಯೆ ನೆನಪಿಟ್ಟುಕೊಳ್ಳುವ ಅವಶ್ಯಕತೆಯೂ ಇಲ್ಲ. ‘ಕ್ಯೂ ಆರ್‌’ ಕೋಡ್‌ ಎಲ್ಲ ವಿವರ ನೀಡಲಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು, ಸಣ್ಣ ವ್ಯವಹಾರಸ್ಥರು, ವಿದ್ಯಾರ್ಥಿಗಳು, ರೈತರು, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು, ಹಿರಿಯ ನಾಗರಿಕರು, ಗೃಹಿಣಿಯರು ಮತ್ತು ಅಂಗವಿಕಲರನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮುಖ್ಯವಾಹಿನಿಗೆ ತರುವುದೇ ಮುಖ್ಯ ಉದ್ದೇಶವಾಗಿದೆ. ಸರ್ಕಾರದಿಂದ ಬರುವ ಮಾಸಾಶನ, ನರೇಗಾ ಮತ್ತಿತರ ಹಣವನ್ನು ನೇರಹಣ ವರ್ಗಾವಣೆ (ಡಿಬಿಟಿ) ಅಡಿಯಲ್ಲಿ ಪಡೆಯಬಹುದು. ಗ್ರಾಹಕರಿಗೆ ನಂಬಿಕಸ್ಥ, ವಿಶ್ವಾಸಾರ್ಹ, ಸಮರ್ಥನೀಯ, ಭ್ರಷ್ಟಾಚಾರ ಮುಕ್ತ ಸೇವೆ ಒದಗಿಸುವುದು ಅಂಚೆ ಬ್ಯಾಂಕಿನ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯವೈಖರಿ ಬಗ್ಗೆ ಸಹಾಯಕ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಮಾಹಿತಿ ನೀಡಿದರು.

‘ಕೈಯಲ್ಲಿ ಕಾಸಿಲ್ಲದೇ ಕಿರಾಣಿ ಖರೀದಿ’

ಐ.ಪಿ.ಪಿ. ಬ್ಯಾಂಕ್ ಖಾತೆಯ ಕಾರ್ಡ್‌ ಅನ್ನು ಗ್ರಾಮೀಣ ಭಾಗದ ಕಿರಾಣಿ ಅಂಗಡಿಯಲ್ಲೂ ಬಳಸಬಹುದು. ಕೈಯಲ್ಲಿ ಕಾಸು ಇಲ್ಲದಿದ್ದರೂ, ಖರೀದಿ ಬಳಿಕ ನಿಮ್ಮ ಐಪಿಪಿ ಬ್ಯಾಂಕ್ ಕಾರ್ಡ್ ತೋರಿಸಿದರೆ, ವರ್ತಕರು ‘ಕ್ಯೂಆರ್’ ಅನ್ನು ಸ್ಕ್ಯಾನ್ ಮಾಡಿ, ಹಣ ಜಮಾ ಮಾಡಿಕೊಳ್ಳುತ್ತಾರೆ. ತುರ್ತು ಅಗತ್ಯವಿದ್ದರೆ, ವರ್ತಕರಿಂದ ನಗದು ಕೂಡ ಪಡೆಯಬಹುದು. ಇದಕ್ಕಾಗಿ ವರ್ತಕರು ಕರೆಂಟ್‌ ಅಕೌಂಟ್ ಮಾಡಲು ಅವಕಾಶವಿದೆ.

ಇದರಲ್ಲಿ ಬಯೋಮೆಟ್ರಿಕ್ ಇದೆ. ಎಸ್‌ಎಂಎಸ್‌ ಅಲರ್ಟ್ ಬರುತ್ತದೆ. ನೆಫ್ಟ್, ಆರ್‌ಟಿಜಿಎಸ್ ಸೇರಿದಂತೆ ಬಹುತೇಕ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು. ಕಾರ್ಡ್‌ನಲ್ಲಿ ಒಂದು ಲಕ್ಷ ತನಕ ಹಣ ಇಡಬಹುದು. ಹೆಚ್ಚುವರಿ ಹಣವು ಖಾತೆಯಲ್ಲಿರುತ್ತದೆ. ಸುಕನ್ಯಾ ಸಮೃದ್ಧಿ, ಆರ್‌.ಡಿ ಮತ್ತಿತರ ಖಾತೆಗಳಿಗೂ ಕಾರ್ಡ್ ಮೂಲಕವೇ ಪಾವತಿಸಬಹುದು. ಅಲ್ಲದೇ, ಕಚೇರಿಗೆ ಅಲೆದಾಡಬೇಕಾದ ಕಿರಿಕಿರಿಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.